ADVERTISEMENT

ಗ್ರಾಮೀಣ ವೈದ್ಯರಿಗೆ ಪಿಜಿ ಪ್ರವೇಶ ಕೋಟಾ ನಿಗದಿಗೆ ರಾಜ್ಯಗಳಿಗೆ ಅಧಿಕಾರ: ಸುಪ್ರೀಂ

ಪಿಟಿಐ
Published 31 ಆಗಸ್ಟ್ 2020, 8:24 IST
Last Updated 31 ಆಗಸ್ಟ್ 2020, 8:24 IST
ನ್ಯಾಯಾಲಯ– ಪ್ರಾತಿನಿಧಿಕ ಚಿತ್ರ
ನ್ಯಾಯಾಲಯ– ಪ್ರಾತಿನಿಧಿಕ ಚಿತ್ರ   

ನವದೆಹಲಿ: ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸ್ನಾತಕೋತ್ತರ ಪದವಿಗೆ ಪ್ರವೇಶ ಕಲ್ಪಿಸಲು ಕೋಟಾ ನಿಗದಿಪಡಿಸುವ ವಿಶೇಷ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಪೀಠವು, ಇಂಥ ವೈದ್ಯರಿಗೆ ವಿಶೇಷ ಅವಕಾಶ ಕಲ್ಪಿಸುವ ಶಾಸನಬದ್ಧ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಪ್ರತಿಪಾದಿಸಿತು.

ಇಂಥ ವಿಶೇಷ ಕೋಟಾ ನೀಡಲುಅಡ್ಡಿಪಡಿಸುವ ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ನಿಯಮವು ಅಸಾಂವಿಧಾನಿಕ ಹಾಗೂ ಹಸ್ತಕ್ಷೇಪ ಮಾಡಿದಂತಾಗಲಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ. ಎಂಸಿಐ ಶಾಸನಬದ್ಧ ಆಡಳಿತ ಸಂಸ್ಥೆ. ಮೀಸಲಾತಿಗೆ ಅವಕಾಶ ಕಲ್ಪಿಸುವ ಯಾವುದೇ ಅಧಿಕಾರ ಅದಕ್ಕೆ ಇಲ್ಲ ಎಂದೂ ಪೀಠವು ಸ್ಪಷ್ಟಪಡಿಸಿತು.

ADVERTISEMENT

ತಮಿಳುನಾಡು ವೈದ್ಯಾಧಿಕಾರಿಗಳ ಸಂಘ, ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಪೀಠ ನಡೆಸಿತು. ವಿಶೇಷ ಕೋಟಾ ನಿಗದಿ ಪಡಿಸುವುದು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ವೈದ್ಯರಿಗೆ ಉತ್ತೇಜಿಸಿದಂತಾಗಲಿದೆ ಎಂದು ಅರ್ಜಿದಾರರು ವಾದಿಸಿದ್ದರು.

ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ವಿನೀತ್ ಶರಣ್, ಎಂ.ಆರ್.ಶಾ ಮತ್ತು ಅನಿರುದ್ಧ ಬೋಸ್ ಅವರು ಪೀಠದ ಇತರ ಸದಸ್ಯರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.