
ನವದೆಹಲಿ: ಇಲ್ಲಿನ ಸೈಯದ್ ಫೈಜ್ ಇಲಾಹಿ ಮಸೀದಿ ಬಳಿ ಅತಿಕ್ರಮಣ ವಿರೋಧಿ ಅಭಿಯಾನದ ವೇಳೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ದೆಹಲಿ ಹೈಕೋರ್ಟ್‌ನ ಆದೇಶದ ಮೇರೆಗೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ), ಇಂದು ಮುಂಜಾನೆ(ಬುಧವಾರ) ಮಸೀದಿಗೆ ಹೊಂದಿಕೊಂಡಿರುವ ಭೂಮಿ ಮತ್ತು ತುರ್ಕಮನ್ ಗೇಟ್ ಬಳಿಯಿರುವ ಸ್ಮಶಾನವನ್ನು ಕೆಡವಲು ಕಾರ್ಯಾಚರಣೆ ನಡೆಸುತ್ತಿದ್ದಾಗ ಘರ್ಷಣೆ ನಡೆದಿದೆ.
ಬುಧವಾರ ಬೆಳಗಿನ ಜಾವದಿಂದಲೇ ತೆರವು ಕಾರ್ಯಾಚರಣೆ ಆರಂಭಿಸಲಾಗಿದ್ದು, ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಸ್ಥಳಕ್ಕೆ ಜೆಸಿಬಿ ಸೇರಿದಂತೆ ಯಂತ್ರೋಪಕರಣಗಳು ಬರುತ್ತಿದ್ದಂತೆ ಸುಮಾರು 100ರಿಂದ 150 ಜನರು ಅಲ್ಲಿ ಜಮಾಯಿಸಿದ್ದಾರೆ.
‘ಕಾರ್ಯಾಚರಣೆಗೆ ಅಡ್ಡಿಪಡಿಸುವ ಉದ್ದೇಶದಿಂದ ಕೆಲ ಕಿಡಿಗೇಡಿಗಳು ಪೊಲೀಸ್ ಮತ್ತು ಎಂಸಿಡಿ ಸಿಬ್ಬಂದಿ ಗುರಿಯಾಗಿಸಿ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲಿ ಗೊಂದಲ ಸೃಷ್ಟಿಯಾಗಿದೆ’ ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ನಿಧಿನ್ ವಲ್ಸನ್ ತಿಳಿಸಿದ್ದಾರೆ.
‘ಕಾರ್ಯಾಚರಣೆ ವೇಳೆ ಮಸೀದಿಗೆ ಯಾವುದೇ ಹಾನಿ ಮಾಡಿಲ್ಲ ಎಂದು ಮನವರಿಕೆ ಮಾಡಿದ ಮೇಲೆ ಕೆಲವರು ಅಲ್ಲಿಂದ ವಾಪಸ್ ಹೋಗಿದ್ದಾರೆ. ಅದಾಗ್ಯೂ ಕೆಲವರು ಸ್ಥಳದಲ್ಲಿ ಕಲ್ಲು ತೂರಾಟ ಮುಂದುವರಿಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಅಶ್ರುವಾಯು ಶೆಲ್ ಸಿಡಿಸಲಾಯಿತು’ ಎಂದು ಅವರು ಹೇಳಿದ್ದಾರೆ.
ಗಲಭೆಯಲ್ಲಿ ಐವರು ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.