ADVERTISEMENT

ಮಾಟ-ಮಂತ್ರಗಳ ಬಗ್ಗೆ ಮಾತಾಡಿ ಪ್ರಧಾನಿ ಹುದ್ದೆ ಗೌರವ ಕಳೆಯಬೇಡಿ: ರಾಹುಲ್‌ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರ ಮಾಟ-ಮಂತ್ರದ ಹೋಲಿಕೆಗೆ ತಿರುಗೇಟು

ಪಿಟಿಐ
Published 11 ಆಗಸ್ಟ್ 2022, 7:11 IST
Last Updated 11 ಆಗಸ್ಟ್ 2022, 7:11 IST
ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸಿದ ಸಂದರ್ಭ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಮಾತುಕತೆ | ಪಿಟಿಐ ಚಿತ್ರ
ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆಸಿದ ಸಂದರ್ಭ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಮಾತುಕತೆ | ಪಿಟಿಐ ಚಿತ್ರ   

ನವದೆಹಲಿ: ಮಾಟ-ಮಂತ್ರದಂತಹ ಮೂಢನಂಬಿಕೆಗಳ ಬಗ್ಗೆ ಮಾತನಾಡಿ ಪ್ರಧಾನಿ ಹುದ್ದೆಯ ಗೌರವವನ್ನು ಕಳೆಯಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಿರುಗೇಟು ನೀಡಿದ್ದಾರೆ. ಕಪ್ಪು ಬಟ್ಟೆಗಳನ್ನು ಧರಿಸುವುದನ್ನು ಮಾಟ-ಮಂತ್ರ, ವಾಮಾಚಾರದಂತಹ ಕೃತ್ಯಗಳಿಗೆ ಹೋಲಿಸಿ ಮೋದಿ ಟೀಕೆ ಮಾಡಿದ್ದರು.

ಪ್ರಧಾನಿ ಮೋದಿ ಅವರಿಗೆ ರಾಷ್ಟ್ರದಲ್ಲಿನ ಬೆಲೆ ಏರಿಕೆ ಅಥವಾ ನಿರುದ್ಯೋಗ ಪರಿಸ್ಥಿತಿ ಕಾಣಿಸುತ್ತಿಲ್ಲವೇ? ಎಂದು ರಾಹುಲ್‌ ಪ್ರಶ್ನಿಸಿದ್ದಾರೆ.

ಪ್ರಧಾನಿಯಾದವರು ಪ್ರಜೆಗಳ ಸಮಸ್ಯೆಗಳ ಬಗ್ಗೆ ಮಾತನಾಡಬೇಕು ಎಂದು ರಾಷ್ಟ್ರ ಬಯಸುತ್ತದೆ. ಆದರೆ ಈ 'ಜುಮ್ಲಾಜೀವಿ' ಏನೇನೋ ಮಾತನಾಡುತ್ತಾರೆ ಎಂದು ಕಾಂಗ್ರೆಸ್‌ ಪಿಎಂ ಮೋದಿ ವಿರುದ್ಧ ಹರಿಹಾಯ್ದಿದೆ.

ADVERTISEMENT

'ಪ್ರಧಾನ ಮಂತ್ರಿ ಅವರೇ ನಿಮ್ಮ ಕರಾಳತನವನ್ನು ಮಚ್ಚಿಕೊಳ್ಳಲು ಮಾಟ-ಮಂತ್ರದಂತಹ ಮೂಢನಂಬಿಕೆಗಳ ಬಗ್ಗೆ ಮಾತನಾಡುತ್ತ ರಾಷ್ಟ್ರದ ಜನತೆಯ ದಾರಿ ತಪ್ಪಿಸುವುದನ್ನು ನಿಲ್ಲಿಸಿ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಪ್ರಧಾನಿ ಹುದ್ದೆಯ ಗೌರವ ಕಳೆಯುವುದನ್ನು ನಿಲ್ಲಿಸಿ' ಎಂದು ರಾಹುಲ್‌ ಆಗ್ರಹಿಸಿದ್ದಾರೆ.

ಪಾನಿಪತ್‌ನಲ್ಲಿ 900 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ, ಎರಡನೇ ಎಥೆನಾಲ್‌ ಉತ್ಪಾದನಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ನರೇಂದ್ರ ಮೋದಿ, 'ಆಗಸ್ಟ್‌ 5ರಂದು ಕೆಲವರು ಹೇಗೆ ಮಾಟ-ಮಂತ್ರಗಳನ್ನು ಹರಡಲು ಪ್ರಯತ್ನಿಸಿದರು ಎಂಬುದನ್ನು ನೋಡಿದ್ದೇವೆ. ಕಪ್ಪು ಬಟ್ಟೆ ಧರಿಸಿದರೆ ಅವರ ಕೆಟ್ಟ ದಿನಗಳು ಕೊನೆಯಾಗುತ್ತವೆ ಎಂದು ಭಾವಿಸಿಕೊಂಡಿದ್ದಾರೆ. ಆದರೆ, ಮಾಟ-ಮಂತ್ರ, ವಾಮಾಚಾರದಂತಹ ಕೃತ್ಯಗಳಿಗೆ, ಮೌಢ್ಯಗಳಿಗೆ ಮೊರೆ ಹೋಗುವುದರಿಂದ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿಲ್ಲ' ಎಂದಿದ್ದರು.

ಬೆಲೆ ಏರಿಕೆ ವಿರುದ್ಧ ಆಗಸ್ಟ್‌ 5ರಂದು ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಸಂಸದರು, ಶಾಸಕರು ಹಾಗೂ ಕಾರ್ಯಕರ್ತರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.