ADVERTISEMENT

ಕೋವಿಡ್‌–19 ಕರಾಳತೆಯ ಮಧ್ಯೆ ಮಾಸ್ಕ್‌ಗಳದ್ದೇ ದೊಡ್ಡ ಕತೆ!

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 6:07 IST
Last Updated 9 ಮಾರ್ಚ್ 2020, 6:07 IST
   

ಬೆಂಗಳೂರು: ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೋವಿಡ್‌–19 ಸೋಂಕು ಈಗ ವಿಶ್ವವನ್ನೇ ವ್ಯಾಪಿಸಿಕೊಂಡಿದೆ. ಸದ್ಯ ಭಾರತದಲ್ಲೂ 40ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.

ಕೋವಿಡ್‌–19 ಸೋಂಕು ವ್ಯಾಪಿಸದಂತೆ ಕೈಗೊಳ್ಳಲಾಗುತ್ತಿರುವ ಕ್ರಮಗಳ ಪೈಕಿ ಮಾಸ್ಕ್‌ಗಳನ್ನು ಧರಿಸುವುದೂ ಒಂದು. ಹೀಗಾಗಿ ಸಹಜವಾಗಿಯೇ ಮಾಸ್ಕ್‌ಗಳಿಗೆ ಜಾಗತಿಕವಾಗಿ ಇನ್ನಿಲ್ಲದ ಬೇಡಿಕೆ ಬಂದಿದೆ. ಇದರ ಪರಿಣಾಮವಾಗಿ ಬೆಲೆ ಏರಿಕೆ, ಕಾಳಸಂತೆ, ಕಳ್ಳತನಗಳೂ ಸೃಷ್ಟಿಯಾಗಿವೆ.

ಮಾಸ್ಕ್‌ಗಳ ಸುತ್ತ ಕೇಳಿ ಬರುತ್ತಿರುವ ಸುದ್ದಿಗಳು ಇಲ್ಲಿವೆ...

ADVERTISEMENT

ಮಹಾರಾಷ್ಟ್ರದಲ್ಲಿ ಮಾಸ್ಕ್‌ಗಳ ಕಳ್ಳತನ
ಮಹಾರಾಷ್ಟ್ರದ ಪ್ರತಿಷ್ಠಿತ ಆಸ್ಪತ್ರೆಯ ಔಷಧ ಮಳಿಗೆಯಲ್ಲಿ ಸುಮಾರು ₹35000 ಮೌಲ್ಯದ ಮಾಸ್ಕ್‌ ಮತ್ತು ಔಷಧಗಳನ್ನು ಕದಿಯುತ್ತಿದ್ದ ಆರೋಪದ ಮೇಲೆ ಫಾರ್ಮಸಿಸ್ಟ್‌ಗಳನ್ನು ಬಂಧಿಸಲಾಗಿದೆ. ಕಳ್ಳತನ ಪ್ರಕರಣ ವರದಿಯಾದ ಬೆನ್ನಲ್ಲೇ ಮಾಸ್ಕ್‌ಗಳನ್ನು ದಾಸ್ತಾನು ಇರಿಸದಂತೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ.

ಹೆಚ್ಚಿನ ಬೆಲೆಗೆ ಮಾಸ್ಕ್‌ ಮಾರಾಟ: ಲೈಸೆನ್ಸ್‌ ರದ್ದು
ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಔಷಧ ಮಳಿಗೆಗಳು ಮಾಸ್ಕ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿವೆ. ಅಲ್ಲದೆ, ದಾಸ್ತಾನು ಮಾಡಲು ಆರಂಭಿಸಿವೆ. ಹೀಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಉತ್ತರ ಪ್ರದೇಶದ ಐದು ಔಷಧ ಮಳಿಗೆಗಳ ಪರವಾನಗಿಯನ್ನು ಅಲ್ಲಿನ ಸರ್ಕಾರ ರದ್ದು ಮಾಡಿದೆ.

ಕಠಿಣ ಕ್ರಮದ ಎಚ್ಚರಿಕೆ
ದೇಶದಲ್ಲಿ ಮಾಸ್ಕ್‌ಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌, ಅಂಗಡಿ ಮಳಿಗೆಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಿತ್ತೇ ತ್ರಯಂಬಕೇಶ್ವರ ದೇವಾಲಯ?
12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ನಾಸಿಕ್‌ನ ತ್ರಯಂಬಕೇಶ್ವರ ದೇವಾಲಯವು ಕೋವಿಡ್‌ ಸೋಂಕು ಭೀತಿ ಹಿನ್ನೆಲೆಯಲ್ಲಿ ಭಕ್ತರು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿದೆ ಎಂದು ಸುದ್ದಿ ಹರಡಿತ್ತು. ಆದರೆ, ದೇಗುಲದ ಆಡಳಿತ ಮಂಡಳಿ ಇದನ್ನು ನಿರಾಕರಿಸಿತು. ಆದರೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಭಕ್ತರಿಗೆ ಸೂಚಿಸಿತ್ತು.

ಶಾಪಿಂಗ್‌ ವೆಬ್‌ಸೈಟ್‌ನಲ್ಲಿ ಮಾಸ್ಕ್‌ ಮಾರಾಟ
ಔಷಧದ ಅಂಗಡಿಗಳಲ್ಲಿ ಮಾಸ್ಕ್‌ಗಳು ದುಬಾರಿ ಬೆಲೆಗೆ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಜನ ಶಾಪಿಂಗ್‌ ವೆಬ್‌ಸೈಟ್‌ಗಳಲ್ಲಿ ಮಾಸ್ಕ್‌ಗಳನ್ನು ಕೋಳ್ಳಲಾರಂಭಿಸಿದ್ದಾರೆ. ಶಾಂಪಿಂಗ್‌ ವೆಬ್‌ಸೈಟ್‌, ಆ್ಯಪ್‌ಗಳು ದುಬಾರಿ ಬೆಲೆಗೆ ವಿಧ ವಿಧದ ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿವೆ.

ಮಾಸ್ಕ್‌ ಜಾಹಿರಾತುಗಳನ್ನು ನಿಷೇಧಿಸಿದ ಫೇಸ್‌ಬುಕ್‌
ಜನರ ಆತಂಕವನ್ನೇ ಬಂಡವಾಳ ಮಾಡಿಕೊಂಡು ಮಾರಾಟವನ್ನು ವೃದ್ಧಿಸಿಕೊಳ್ಳುವ ವ್ಯಾಪಾರಗಾರರ ಪ್ರವೃತ್ತಿಯನ್ನು ಪ್ರೋತ್ಸಾಹಿಸದಿರಲು ಫೇಸ್‌ಬುಕ್‌ ನಿರ್ಧರಿಸಿದೆ. ಹೀಗಾಗಿ ಫೇಸ್‌ಬುಕ್‌ ತನ್ನ ವೇದಿಕೆಯಲ್ಲಿ ಮಾಸ್ಕ್‌ಗಳ ಜಾಹೀರಾತುಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.

ಅಮೆರಿಕದಲ್ಲೇ ಮಾಸ್ಕ್‌ಗಳಿಲ್ಲ!
ಎಲ್ಲ ರೀತಿಯಿಂದಲೂ ಮುಂದುವರಿದಿರುವ ರಾಷ್ಟ್ರ ಅಮೆರಿಕ ಫೇಸ್‌ ಮಾಸ್ಕ್‌ಗಳ ಕೊರತೆ ಅನುಭವಿಸುತ್ತಿವೆ. ಪೂರೈಕೆಗೆ ಅಗತ್ಯವಿದ್ದಷ್ಟು ಮಾಸ್ಕ್‌ಗಳಿಲ್ಲದೇ ಹೈರಾಣಾಗಿದೆ. ಸದ್ಯ ಅಲ್ಲಿ 3.5 ಬಿಲಿಯನ್‌ ಮಾಸ್ಕ್‌ಗಳು ಅಗತ್ಯವಿದೆ ಎನ್ನಲಾಗಿದೆ. ಆದರೆ ಲಭ್ಯವಿರುವುದು ಆ ಸಂಖ್ಯೆಯಲ್ಲಿ ಶೇ. 1ರಷ್ಟು ಮಾತ್ರ! ಈ ಕುರಿತು ಬ್ಯುಸಿನೆಸ್‌ ಇನ್‌ಸೈಡರ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.