ADVERTISEMENT

ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದ ಯುವತಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2018, 9:59 IST
Last Updated 4 ಸೆಪ್ಟೆಂಬರ್ 2018, 9:59 IST
ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆ ತಮಿಳ್‌ಸಾಯಿ ಸೌಂದರಾಜನ್‌
ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆ ತಮಿಳ್‌ಸಾಯಿ ಸೌಂದರಾಜನ್‌    

ತೂತುಕುಡಿ (ತಮಿಳುನಾಡು): ವಿಮಾನದಲ್ಲಿತಮಿಳುನಾಡು ಘಟಕದ ಬಿಜೆಪಿ ಅಧ್ಯಕ್ಷೆ ಎದುರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಧಿಕ್ಕಾರ ಕೂಗಿ ಬಂಧನಕ್ಕೆ ಒಳಗಾಗಿದ್ದ ಯುವತಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ.

ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೂತುಕುಡಿ ಪೊಲೀಸರು ಯುವತಿ ಲೂಯಿಸ್‌ ಸೋಫಿಯಾ ಅವರನ್ನು ಸೋಮವಾರ ಬಂಧಿಸಿದ್ದರು.

ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆ ತಮಿಳ್ಸಾಯಿ ಸೌಂದರಾಜನ್‌ ಮತ್ತು ಲೂಯಿಸ್‌ ಸೋಫಿಯಾ ಸೋಮವಾರ ಒಂದೇ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ತಮಿಳಿಸಾಯಿ ಸೌಂದರರಾಜನ್‌ ಅವರುಸೋಫಿಯಾ ಅವರಿದ್ದ ಕಡೆ ಬಂದು ಬ್ಯಾಗ್‌ ತೆಗೆದುಕೊಳ್ಳುವಾಗ ಸೋಫಿಯಾ ಅವರು ಮೋದಿ ಮತ್ತು ಬಿಜೆಪಿಯ ಫ್ಯಾಶಿಸ್ಟ್‌ ಸರ್ಕಾರಕ್ಕೆ ಧಿಕ್ಕಾರ ಎಂದು ಜೋರಾಗಿ ಕೂಗಿದ್ದರು. ಈ ವೇಳೆ ಸೌಂದರರಾಜನ್‌ ಸೋಫಿಯಾ ವಿರುದ್ಧ ವಿಮಾನಯಾನ ಸಿಬ್ಬಂದಿಗಳಿಗೆ ದೂರು ನೀಡಿದ್ದರು.

ADVERTISEMENT

ವಿಮಾನ ತೂತುಕುಡಿಯಲ್ಲಿ ಇಳಿಯುತ್ತಿದ್ದಂತೆ ಪೊಲೀಸರು ಸೋಫಿಯಾರನ್ನು ಬಂಧಿಸಿದ್ದರು. ಘಟನೆ ಬಗ್ಗೆ ಸೌಂದರರಾಜನ್‌ ತೂತುಕುಡಿ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ತೊಂದರೆ ಹಾಗೂ ಭಯ ಸೃಷ್ಟಿಸುವ ಆರೋಪದಡಿಯಲ್ಲಿ ಸೋಫಿಯಾ ವಿರುದ್ಧ ಪ್ರಕರಣ ದಾಖಲಾಗಿದೆ.

ಧಿಕ್ಕಾರ ಕೂಗಿದ ಯುವತಿ ಸಾಮಾನ್ಯ ಪ್ರಯಾಣಿಕಳಂತೆ ಕಾಣುತ್ತಿಲ್ಲ, ಆಕೆಯ ಹಿಂದೆ ತೀವ್ರಗಾಮಿ ಸಂಘಟನೆಯೊಂದರ ಕೈವಾಡ ಇರುವ ಬಗ್ಗೆ ನನಗೆ ಅನುಮಾನವಿದೆ ಎಂದುಸೌಂದರರಾಜನ್‌ ತಿಳಿಸಿದ್ದಾರೆ.

28 ವರ್ಷದ ಸೋಫಿಯಾ ಕೆನಡಾದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ. ಬರಹಗಾರ್ತಿಯಾಗಿರುವ ಸೋಫಿಯಾ ಗಣಿತಜ್ಞೆಯಾಗಿದ್ದಾರೆ.

ನಿವೃತ್ತ ಸರ್ಕಾರಿ ಅಧಿಕಾರಿಯಾಗಿರುವ ಸೋಫಿಯಾ ತಂದೆ ಬಿಜೆಪಿ ಅಧ್ಯಕ್ಷೆ ವಿರುದ್ಧ ಬೆದರಿಕೆ ಆರೋಪದಡಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.