ಭುವನೇಶ್ವರ: ಬಾಲೇಶ್ವರದ ಎಫ್.ಎಂ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿ, ಬಿಜೆಡಿ ಕಾರ್ಯಕರ್ತರು ಶುಕ್ರವಾರ ಇಲ್ಲಿನ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಡಿಯ ಮಹಿಳಾ, ವಿದ್ಯಾರ್ಥಿ ಮತ್ತು ಯುವ ಘಟಕದ ಕಾರ್ಯಕರ್ತರು ಮುಖಕ್ಕೆ ಕಪ್ಪು ಮಾಸ್ಕ್ ಧರಿಸಿಕೊಂಡು ಮೌನ ಪ್ರತಿಭಟನೆ ನಡೆಸಿದರು. ನ್ಯಾಯಾಂಗ ತನಿಖೆಯೇ ಆಗಬೇಕು ಎಂದು ಪಟ್ಟು ಹಿಡಿದರು.
‘ಸರ್ಕಾರವು ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವವರೆಗೆ ಪ್ರತಿಭಟನೆ ಮುಂದುವರಿಸಲು ಬಿಜೆಡಿ ನಿರ್ಧರಿಸಿದೆ. ಜುಲೈ 21ರಂದು ಕಟಕ್, ಸಂಭಲ್‌ಪುರ ಮತ್ತು ಬೆಹ್ರಾಂಪುರದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಯಲಿದೆ’ ಎಂದು ಬಿಜೆಡಿ ಉಪಾಧ್ಯಕ್ಷ ದೇವಿ ಪ್ರಸಾದ್ ಮಿಶ್ರಾ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಜುಲೈ 16ರಂದು ಶಾಂತಿಯುತ ಪ್ರತಿಭಟನೆಗೆ ಮುಂದಾದ ನಮ್ಮ ಮೇಲೆ ಪೊಲೀಸರು ಅಶ್ರುವಾಯು, ಜಲಫಿರಂಗಿ ಬಳಸಿದ್ದರಿಂದ ತಳ್ಳಾಟ –ನೂಕಾಟ ಉಂಟಾಗಿ ಅನೇಕ ಕಾರ್ಯಕರ್ತರು ಗಾಯಗೊಂಡಿದ್ದಾರೆ’ ಎಂದು ಬಿಜೆಡಿ ನಾಯಕಿ ಟುಕುನಿ ಸಾಹೊ ಆಕ್ರೋಶ ವ್ಯಕ್ತಪಡಿಸಿದರು.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ದ್ವಿತೀಯ ವರ್ಷದ ಬಿ.ಇಡಿ ವಿದ್ಯಾರ್ಥಿನಿ ಜುಲೈ 12ರಂದು ಕಾಲೇಜು ಆವರಣದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಜುಲೈ 14ರಂದು ಅವರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.