ADVERTISEMENT

ಆಸ್ತಿ ಹಕ್ಕು: ಬುಡಕಟ್ಟು ಮಹಿಳೆಯ ಹಕ್ಕಿನ ನಿರಾಕರಣೆ ಸಲ್ಲ

‘ಹಿಂದೂ ಉತ್ತರಾಧಿಕಾರಿ ಕಾಯ್ದೆ’ಗೆ ತಿದ್ದುಪಡಿ: ಪರಿಶೀಲನೆ ನಡೆಸುವಂತೆ ಕೇಂದ್ರಕ್ಕೆ ‘ಸುಪ್ರೀಂ’ ನಿರ್ದೇಶನ

ಪಿಟಿಐ
Published 9 ಡಿಸೆಂಬರ್ 2022, 16:20 IST
Last Updated 9 ಡಿಸೆಂಬರ್ 2022, 16:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪಿತ್ರಾರ್ಜಿತ ಆಸ್ತಿ ಮೇಲೆ ಬುಡಕಟ್ಟು ಪುರುಷನಿಗೆ ಇರುವಷ್ಟೇ ಹಕ್ಕು ಬುಡಕಟ್ಟು ಮಹಿಳೆಗೂ ಇದೆ. ಆದ್ದರಿಂದ ಪರಿಶಿಷ್ಟ ಪಂಗಡಕ್ಕೂ ಅನ್ವಯವಾಗುವಂತೆಹಿಂದೂ ಉತ್ತರಾಧಿಕಾರಿ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿತು.

‘ಬುಡಕಟ್ಟು ಅಲ್ಲದ ಮಹಿಳೆಗೆ ಆಸ್ತಿಯ ಹಕ್ಕಿದೆ. ಹೀಗಿರುವಾಗ ಬುಡಕಟ್ಟು ಮಹಿಳೆಗೆ ಮಾತ್ರ ಈ ಹಕ್ಕನ್ನು ನಿರಾಕರಿಸುವುದಕ್ಕೆ ಯಾವ ಕಾರಣವೂ ಇಲ್ಲ. ತಮ್ಮ ಜೊತೆಗೆ ಆಸ್ತಿ ಹಕ್ಕನ್ನು ಹಂಚಿಕೊಂಡಿದ್ದ ವ್ಯಕ್ತಿಯು ಮೃತಪಟ್ಟಾಗ ಆತನ ಪಾಲಿನ ಆಸ್ತಿಯ ಹಕ್ಕನ್ನು ಬುಡಕಟ್ಟು ಮಹಿಳೆಗೆ ನೀಡದಿರುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠವು ಅಭಿಪ್ರಾಯಪಟ್ಟಿತು.

‘ಸಂವಿಧಾನದ ವಿಧಿ 14 ಮತ್ತು 21ರಲ್ಲಿ ನೀಡಲಾಗಿರುವ ಸಮಾನತೆಯ ಹಕ್ಕನ್ನು ಪರಿಶಿಷ್ಟ ಪಂಗಡದವರಿಗೂ ಅನ್ವಯವಾಗುವಂತೆ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಕೇಂದ್ರ ಸರ್ಕಾರವು ಕಾರ್ಯೋನ್ಮುಖವಾಗಲಿದೆ ಎಂದು ನಾವು ನಂಬುತ್ತೇವೆ’ ಎಂದಿತು.

ADVERTISEMENT

ಪಿತ್ರಾರ್ಜಿತ ಆಸ್ತಿಯಲ್ಲಿ ಬುಡಕಟ್ಟು ಮಹಿಳೆಗೆ ಪುರುಷನಂತೆ ಸಮಾನ ಹಕ್ಕಿದೆಯೇ ಎನ್ನುವ ಕುರಿತು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ರೀತಿ ಅಭಿಪ್ರಾಯಪಟ್ಟಿದೆ. ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಸೆಕ್ಷನ್‌ 2(2)ರಲ್ಲಿ ಪ್ರಕಾರ, ಈ ಕಾಯ್ದೆಯು ಪರಿಶಿಷ್ಟ ಪಂಗಡವರಿಗೆ ಅನ್ವಯವಾಗುವುದಿಲ್ಲ. ಈ ಕಾರಣ ನೀಡಿ, ಸುಪ್ರೀಂ ಕೋರ್ಟ್‌ ಈ ಅರ್ಜಿಯನ್ನು ವಜಾ ಮಾಡಿತು.

ಭಾರತದ ಸಂವಿಧಾನಕ್ಕೆ 70 ವರ್ಷ ಸಂದರೂ, ಬುಡಕಟ್ಟು ಮಹಿಳೆಯೊಬ್ಬರಿಗೆ ಸಮಾನತೆಯ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎಂದರೆ ಈ ಕುರಿತು ಕ್ರಮಕೈಗೊಳ್ಳಲು ಇದು ಸಕಾಲ

ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.