ಲಹರ್ ಸಿಂಗ್ ಸಿರೋಯಾ
(ಪ್ರಜಾವಾಣಿ ಚಿತ್ರ)
ಬೆಂಗಳೂರು: ನಿವೃತ್ತ ನ್ಯಾ. ಸುದರ್ಶನ್ ರೆಡ್ಡಿ ಅವರನ್ನು ಬಿಜೆಪಿ ನಾಯಕ ಮನೋಹರ್ ಪರಿಕ್ಕರ್ ಅವರ ‘ಜೀ ಹುಜೂರ್ ಮನುಷ್ಯ’ ಎಂದು ಟೀಕಿಸಿದ್ದ ಕಾಂಗ್ರೆಸ್ ಪಕ್ಷ ಇದೀಗ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅವರನೇ ಕಣಕ್ಕೆ ಇಳಿಸಿದೆ ಎಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ವ್ಯಂಗ್ಯವಾಡಿದ್ದಾರೆ.
ಜನರನ್ನು ತನ್ನ ರಾಜವಂಶದ ಅಗತ್ಯಗಳಿಗೆ ತಕ್ಕಂತೆ ಕಾಂಗ್ರೆಸ್ ಬಳಸಿಕೊಳ್ಳುತ್ತದೆ ಎಂದು ಕಟುವಾಗಿ ಟೀಕಿಸಿರುವ ಲಹರ್ ಸಿಂಗ್, ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳು ಇದನ್ನು ಅರ್ಥಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
2013ರಲ್ಲಿ, ಗೋವಾದಲ್ಲಿ ಲೋಕಾಯುಕ್ತರಾಗಿ ನೇಮಕಗೊಂಡಾಗ ಕಾಂಗ್ರೆಸ್ ನಾಯಕರು ಸುದರ್ಶನ್ ರೆಡ್ಡಿ ಅವರನ್ನು ಮನೋಹರ್ ಪರಿಕ್ಕರ್ ಅವರ 'ಜೀ ಹುಜೂರ್ ಮನುಷ್ಯ' ಎಂದು ಕರೆದಿದ್ದರು. ಆಗ ಸುದರ್ಶನ್ ರೆಡ್ಡಿ ಅವರ ಪ್ರಾಮಾಣಿಕತೆಯನ್ನು ಕಾಂಗ್ರೆಸ್ ಅನುಮಾನಿಸಿತ್ತು. ಸುದರ್ಶನ್ ರೆಡ್ಡಿ 'ಜೀ ಹುಜೂರ್ ಮನುಷ್ಯ' ಆಗಿದ್ದಕ್ಕೆ ಅವರನ್ನು ಗೋವಾದ ಲೋಕಾಯುಕ್ತರಾಗಿ ನೇಮಿಸಲಾಗಿತ್ತೆ? ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಲಹರ್ ಸಿಂಗ್ ಆಗ್ರಹಿಸಿದ್ದಾರೆ.
ದುರದೃಷ್ಟವೆಂದರೆ, ನ್ಯಾಯಾಧೀಶರು ಮತ್ತು ಸಾಂವಿಧಾನಿಕ ಅಧಿಕಾರಿಗಳ ಮೇಲೆ ಪ್ರತಿಕೂಲ ಹಣೆಪಟ್ಟಿ ಹಚ್ಚುವುದು ಮತ್ತು ಒತ್ತಡ ಹೇರುವುದು ಕಾಂಗ್ರೆಸ್ ಪಕ್ಷದ ಎರಡನೇ ಮುಖವಾಗಿದೆ. 12 ವರ್ಷಗಳ ನಂತರ ಸುದರ್ಶನ್ ರೆಡ್ಡಿ ಅವರು ಇದ್ದಕ್ಕಿದ್ದಂತೆ ಆ ಪಕ್ಷದ ಸೈದ್ಧಾಂತಿಕ ಯೋಧರಾಗಿರುವುದನ್ನು ಕಂಡು ಆಶ್ಚರ್ಯಪಡುತ್ತಿದ್ದೇನೆ. ಜನರನ್ನು ತನ್ನ ರಾಜವಂಶದ ಅಗತ್ಯಗಳಿಗೆ ತಕ್ಕಂತೆ ಮಾತ್ರ ಕಾಂಗ್ರೆಸ್ ಬಳಸಿಕೊಂಡು ಬಂದಿದೆ ಎಂದು ಟೀಕಿಸಿದ್ದಾರೆ.
ಇಂಡಿಯಾ ಮೈತ್ರಿಕೂಟದ ಪಾಲುದಾರರು ಇದನ್ನು ಅರ್ಥಮಾಡಿಕೊಂಡು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ರಾಧಾಕೃಷ್ಣನ್ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕುತ್ತಾರೆ ಎಂದು ನಂಬಿದ್ದೇನೆ ಎಂದು ಲಹರ್ ಸಿಂಗ್ ಹೇಳಿದ್ದಾರೆ. ಈ ಮೂಲಕ ನಮ್ಮ ಅಭ್ಯರ್ಥಿಯ ಬೆಂಬಲದ ಸಂಖ್ಯೆ ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.