ADVERTISEMENT

ಸುಕನ್ಯಾ ಸಮೃದ್ಧಿ | ₹3.25 ಲಕ್ಷ ಕೋಟಿ ಜಮೆ: ಪ್ರಧಾನಿ ಮೋದಿ

ಸತ್ಯಸಾಯಿ ಬಾಬಾ ಜನ್ಮಶತಮಾನೋತ್ಸವ * ಪ್ರಧಾನಿ ಮೋದಿ ಭಾಷಣ

ಪಿಟಿಐ
Published 19 ನವೆಂಬರ್ 2025, 15:44 IST
Last Updated 19 ನವೆಂಬರ್ 2025, 15:44 IST
ಪುಟ್ಟಪರ್ತಿಯಲ್ಲಿರುವ ಶ್ರೀ ಸತ್ಯಸಾಯಿ ಬಾಬಾ ಮಹಾಸಮಾಧಿಗೆ ಪ್ರಧಾನಿ ಮೋದಿ ಅವರು ನಮನ ಸಲ್ಲಿಸಿ ಧ್ಯಾನ ಮಾಡಿದರು – ಪಿಟಿಐ ಚಿತ್ರ
ಪುಟ್ಟಪರ್ತಿಯಲ್ಲಿರುವ ಶ್ರೀ ಸತ್ಯಸಾಯಿ ಬಾಬಾ ಮಹಾಸಮಾಧಿಗೆ ಪ್ರಧಾನಿ ಮೋದಿ ಅವರು ನಮನ ಸಲ್ಲಿಸಿ ಧ್ಯಾನ ಮಾಡಿದರು – ಪಿಟಿಐ ಚಿತ್ರ   

ಪುಟ್ಟಪರ್ತಿ (ಆಂಧ್ರಪ್ರದೇಶ): ಸುಕನ್ಯಾ ಸಮೃದ್ಧಿ ಯೋಜನೆಯಡಿ ಇದುವರೆಗೆ ನಾಲ್ಕು ಕೋಟಿಗೂ ಅಧಿಕ ಖಾತೆಗಳನ್ನು ತೆರೆಯಲಾಗಿದ್ದು, ₹3.25 ಲಕ್ಷ ಕೋಟಿಗೂ ಅಧಿಕ ಹಣ ಅದಕ್ಕೆ ಜಮೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದರು.

ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಾಬಾ ಅವರ ಸೇವೆ ಮತ್ತು ಬೋಧನೆಗಳು ಪ್ರಪಂಚದ ಲಕ್ಷಾಂತದ ಭಕ್ತರಿಗೆ ಮಾರ್ಗದರ್ಶನ ನೀಡುತ್ತದೆ’ ಎಂದು ಹೇಳಿದರು.

‘ಭಗವಾನ್‌ ಸತ್ಯಸಾಯಿಬಾಬಾ ಅವರ ಬದುಕು ‘ವಸುದೈವಕ ಕುಟುಂಬಕಂ’ ಅನ್ನು ಪ್ರತಿಬಿಂಬಿಸುತ್ತದೆ. ಗುಜರಾತ್‌ ಭೂಕಂಪ ಸಂದರ್ಭದಲ್ಲಿ ಸತ್ಯಸಾಯಿ ದಳದ ಸದಸ್ಯರ ಸೇವೆಯನ್ನು ಈಗಲೂ ಸ್ಮರಿಸಿಕೊಳ್ಳುತ್ತೇ‌ನೆ’ ಎಂದು ಹೇಳಿದರು.

ADVERTISEMENT

20 ಸಾವಿರ ಬಾಲಕಿಯರಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಸೌಲಭ್ಯ ದೊರಕುವಂತೆ ಮಾಡಿದ ಸತ್ಯಸಾಯಿ ಟ್ರಸ್ಟ್ ಅನ್ನು ಶ್ಲಾಘಿಸಿದ ಮೋದಿ ಅವರು, ಯೋಜನೆಯ ಪ್ರಮಾಣಪತ್ರಗಳನ್ನು ವಿತರಿಸಿದರು. 

‘ಸಾಯಿ ರಾಂ’ ಮಂತ್ರದೊಂದಿಗೆ ಪ್ರಧಾನಿ ಮೋದಿ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಬಳಿಕ ಪ್ರಶಾಂತಿ ನಿಲಯಂನಲ್ಲಿನ ಸಾಯಿ ಕುಲ್ವಂತ್‌ ಸಭಾಂಗಣದಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು,‌ ಓಂಕಾರ ಸಭಾಂಗಣದಲ್ಲಿ ಸತ್ಯಸಾಯಿ ಬಾಬಾ ಅವರ ದರ್ಶನ ಪಡೆದರು. 

ಶ್ರೀ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಆಯೋಜಿಸಿದ್ದ ‘ಗೌದಾನ್‌’ ಕಾರ್ಯಕ್ರಮದಲ್ಲಿ ಮೋದಿ ಅವರು ರೈತರಿಗೆ ಗೋವುಗಳನ್ನು ವಿತರಿಸಿದರು. ಸತ್ಯಸಾಯಿ ಬಾಬಾ ಜನ್ಮಶತಮಾನೋತ್ಸವ ಸ್ಮರಣಾರ್ಥವಾಗಿ ₹100ರ ನಾಣ್ಯ ಮತ್ತು ನಾಲ್ಕು ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌, ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ಕೇಂದ್ರ ಸಚಿವರು ಸೇರಿದಂತೆ ಹಲವರು ಭಾಗಿಯಾಗಿದ್ದರು.

ನಟಿ ಐಶ್ವರ್ಯ ರೈ ಅವರು ಪ್ರಧಾನಿ ಮೋದಿ ಅವರ ಪಾದ ಮುಟ್ಟಿ ನಮಸ್ಕರಿಸಿದರು – ಪಿಟಿಐ ಚಿತ್ರ

‘ಸಾವಯವ ಕೃಷಿಯಲ್ಲಿ ಜಾಗತಿಕ ಕೇಂದ್ರವಾ‌ಗುವ ಹಾದಿಯಲ್ಲಿದ್ದೇವೆ’

ಕೊಯಮತ್ತೂರು: ಭಾರತವು ಸಾವಯವ ಕೃಷಿಯಲ್ಲಿ ಜಾಗತಿಕ ಕೇಂದ್ರವಾಗುವ ಹಾದಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದರು. ದಕ್ಷಿಣ ಭಾರತ ಸಾವಯವ ಕೃಷಿ ಶೃಂಗ–2025 ಅನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಕೃಷಿಯು ಆಧುನಿಕ ಅವಕಾಶವನ್ನು ನೀಡುತ್ತದೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬೆಳೆಸುತ್ತದೆ ಎಂಬುವುದನ್ನು ಯುವಕರು ಕಂಡುಕೊಂಡಿದ್ದಾರೆ’ ಎಂದು ಹೇಳಿದರು. ಇದೇ ವೇಳೆ ಪಿ.ಎಂ ಕಿಸಾನ್‌ ಯೋಜನೆಯ 21ನೇ ಕಂತನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದರು.

ಪುಟ್ಟಪರ್ತಿಯಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ಸುಕನ್ಯಾ ಸಮೃದ್ಧಿ ಕಾರ್ಡ್‌ ವಿತರಿಸಿದರು   ಪಿಟಿಐ ಚಿತ್ರ

ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಐಶ್ವರ್ಯ

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪಾದಮುಟ್ಟಿ ನಮಸ್ಕರಿಸಿದರು. ಪ್ರಧಾನಿ ಮೋದಿ ಅವರನ್ನು ಉಲ್ಲೇಖಿಸಿ ಮಾತನಾಡಿದ ಐಶ್ವರ್ಯ ಅವರು ‘ತಮ್ಮ ಉಪಸ್ಥಿತಿಯು ಶತಮಾನ ಸಂಭ್ರಮಕ್ಕೆ ಘನತೆ ಮತ್ತು ಸ್ಪೂರ್ತಿಯನ್ನು ನೀಡಿದೆ ಮತ್ತು ಸೇವೆಯೆ ನಿಜವಾದ ನಾಯಕತ್ವ ಮತ್ತು ಮಾನವನ ಸೇವೆಯು ದೇವರ ಸೇವೆ ಇದ್ದಂತೆ ಎಂಬ ಸ್ವಾಮಿಗಳ ಸಂದೇಶವನ್ನು ನೆನಪಿಸುತ್ತದೆ’ ಎಂದು ತಿಳಿಸಿದರು. ಸತ್ಯಸಾಯಿ ಬಾಲ ವಿಕಾಸ್‌ ಕಾರ್ಯಕ್ರಮದ ವಿದ್ಯಾರ್ಥಿಯಾಗಿದ್ದ ಐಶ್ವರ್ಯ ‘ಒಂದು ಶತಮಾನ ಕಳೆದಿದ್ದರೂ ಗುರುಗಳ ಬೋಧನೆ ಮಾರ್ಗದರ್ಶನ ಮತ್ತು ಕಾರುಣ್ಯವು ವಿಶ್ವದಾದ್ಯಂತ ಇರುವ ಲಕ್ಷಾಂತರ ಜನರ ಹೃದಯದಲ್ಲಿ ಪ್ರತಿಧ್ವನಿಸಲಿದೆ’ ಎಂದು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.