ADVERTISEMENT

ಸುಲ್ಲಿ ಆ್ಯಪ್‌ ಪ್ರಕರಣ: ಆರೋಪಿಯ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಪಿಟಿಐ
Published 12 ಆಗಸ್ಟ್ 2022, 14:26 IST
Last Updated 12 ಆಗಸ್ಟ್ 2022, 14:26 IST
   

ನವದೆಹಲಿ: ಉತ್ತರ ಪ್ರದೇಶ, ಮಹಾರಾಷ್ಟ್ರದ ವಿವಿಧೆಡೆ ದಾಖಲಾಗಿರುವ ಎಫ್ಐಆರ್‌ಗಳನ್ನು ಮೊದಲಿಗೆ ದೆಹಲಿಯಲ್ಲಿ ದಾಖಲಾದ ಎಫ್‌ಐಆರ್‌ಗೆ ಸೇರಿಸುವಂತೆಕೋರಿ ಸುಲ್ಲಿ ಡೀಲ್ಸ್‌ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದ ಓಂಕಾರೇಶ್ವರ ಠಾಕೂರ್‌,ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ಒಪ್ಪಿಗೆ ನೀಡಿದೆ.

ಈ ಅರ್ಜಿಯ ಕುರಿತು ಪ್ರತಿಕ್ರಿಯಿಸುವಂತೆ ದೆಹಲಿ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಹೇಳಿದೆ.

‘ಹಲವು ಮಂದಿ, ಹಲವು ಬಾರಿ ಚಿತ್ರಗಳನ್ನುಆ್ಯಪ್‌ಗೆ ಅಪ್‌ಲೋಡ್‌ ಮಾಡಿದ್ದಾರೆ. ಆದ್ದರಿಂದ ಹಲವು ಅಪರಾಧ ಜರುಗಿದೆ. ತನಿಖೆಯನ್ನು ನಿಲ್ಲಿಸಿ ಎಂದು ಹೇಳಲಾಗುವುದಿಲ್ಲ’ ಎಂದುನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌ ಮತ್ತು ಎಂ.ಎಂ. ಸುಂದರೇಶ್‌ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು. ಮೂರು ವಾರಗಳ ನಂತರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಹೇಳಿತು.

ADVERTISEMENT

‘ಸುಲ್ಲಿ ಡೀಲ್ಸ್‌’ ಆ್ಯಪ್‌ನಲ್ಲಿ ಮುಸ್ಲಿಂ ಮಹಿಳೆಯರ ಫೋಟೊ ಪ್ರಕಟಿಸಿ, ಅವರನ್ನು ಆನ್‌ಲೈನ್‌ ಹರಾಜು ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು 2021ರ ಜುಲೈನಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ನಂತರ, ‘ಬುಲ್ಲಿಭಾಯಿ’ ಆ್ಯಪ್‌ ಮೂಲಕಮುಸ್ಲಿಂ ಮಹಿಳೆಯರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಜನವರಿಯಲ್ಲಿ ದೆಹಲಿ ಪೊಲೀಸರು ಮತ್ತೊಂದು ಎಫ್‌ಐಆರ್‌ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.