ADVERTISEMENT

ಸಂಸತ್ತಿನ ಕಲಾಪದ ನಡುವೆಯೇ ಹಾಜರಾಗುವಂತೆ ಇ.ಡಿ ಸಮನ್ಸ್ ನೀಡಿದೆ: ಖರ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಆಗಸ್ಟ್ 2022, 9:40 IST
Last Updated 4 ಆಗಸ್ಟ್ 2022, 9:40 IST
   

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು(ಇ.ಡಿ) ಸಮನ್ಸ್ ನೀಡಿದ್ದು, ಅಧಿವೇಶನದ ನಡುವೆಯೇ ಮಧ್ಯಾಹ್ನ 12.30ಕ್ಕೆ ಹಾಜರಾಗುವಂತೆ ಸೂಚಿಸಿದೆ ಎಂದು ಬೆಳಿಗ್ಗೆ ರಾಜ್ಯಸಭೆ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಾನೂನು ಪ್ರಕಾರ, ನಡೆದುಕೊಳ್ಳಲು ನಾನು ಬಯಸುತ್ತೇನೆ. ಆದರೆ, ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಈ ರೀತಿ ಸಮನ್ಸ್ ನೀಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.

ಇದೇವೇಳೆ, ಪೊಲೀಸರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮನೆಗೆ ಘೇರಾವ್ ಹಾಕಿದ್ದಾರೆ. ಇದು ಎಷ್ಟು ಸಮಂಜಸ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಇದಕ್ಕೆಲ್ಲ ನಾವು ಹೆದರುವುದಿಲ್ಲ, ನಾವು ಹೋರಾಡುತ್ತೇವೆ’ ಎಂದು ಖರ್ಗೆ ಹೇಳಿದ್ದಾರೆ.

ADVERTISEMENT

ನಿನ್ನೆ, ಹೆರಾಲ್ಡ್ ಹೌಸ್‌ನಲ್ಲಿರುವ ಯಂಗ್ ಇಂಡಿಯಾ ಕಂಪನಿಯನ್ನು ಸೀಲ್ ಮಾಡಿದ್ದ ಇ.ಡಿ ಇಂದು ಶೋಧ ಕಾರ್ಯಾಚರಣೆ ನಡೆಸುವ ಹಿನ್ನೆಲೆಯಲ್ಲಿ ಸಂಸ್ಥೆಯ ಪ್ರತಿನಿಧಿಯಾಗಿ ಹಾಜರಿರುವಂತೆ ಖರ್ಗೆಗೆ ಸಮನ್ಸ್ ನೀಡಿತ್ತು.

ಈ ನಡುವೆ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ರಾಜ್ಯಸಭೆಯಲ್ಲಿ ಕಿಡಿ ಕಾರಿದರು. ರಾಜಕೀಯ ಉದ್ದೇಶಕ್ಕಾಗಿ ಕೇಂದ್ರದ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಖರ್ಗೆ ಆರೋಪಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗದ್ದಲದ ವಾತಾವರಣ ಉಂಟಾಗಿ ಕಲಾಪಕ್ಕೆ ಅಡ್ಡಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.