ADVERTISEMENT

ನ್ಯಾಯಾಂಗ ನಿಂದನೆ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

ಪೂಜೆಗೆ ಅವಕಾಶ ನೀಡದ ರಾಮಚಂದ್ರಾಪುರ ಮಠ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 19:38 IST
Last Updated 8 ಜುಲೈ 2019, 19:38 IST
   

ನವದೆಹಲಿ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಉಪಾಧಿವಂತ ಅರ್ಚಕರಿಗೆ ಪೂಜಾ ಅವಕಾಶ ನಿರಾಕರಿಸಿದ್ದ ಬೆಳವಣಿಗೆಗೆ ಸಂಬಂಧಿಸಿದಂತೆ ರಾಮಚಂದ್ರಾಪುರ ಮಠದ ವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖ ಲಿಸಲು ಸೂಚಿಸಿದ್ದ ಹೈಕೋರ್ಟ್ ಆದೇ ಶಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ.

ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ರಿಜಿಸ್ಟ್ರಾರ್‌ಗೆ ಸೂಚಿಸಿ ಹೈಕೋರ್ಟ್‌ನ ಧಾರವಾಡ ಪೀಠವು, ಕಳೆದ ಏಪ್ರಿಲ್‌ನಲ್ಲಿ ನೀಡಿದ್ದ ಆದೇಶಕ್ಕೆ ತಡೆ ಕೋರಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್‌ ಹಾಗೂ ದಿನೇಶ್‌ ಮಾಹೇಶ್ವರಿ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ.

‘ಹೈಕೋರ್ಟ್‌ ಈ ರೀತಿಯ ಆದೇಶ ನೀಡಬಾರದಿತ್ತು’ ಎಂಬ ರಾಮಚಂದ್ರಾಪುರ ಮಠದ ಪರ ವಕೀಲ ಮುಕುಲ್‌ ರೋಹಟ್ಗಿಅವರ ವಾದ ಪುರಸ್ಕರಿಸಿದ ನ್ಯಾಯಪೀಠವು, ಜುಲೈ 22ರೊಳಗೆ ಪ್ರತಿಕ್ರಿಯೆ ಸಲ್ಲಿಸು ವಂತೆ ಅರ್ಚಕರಪರ ವಕೀಲರಿಗೆ ನಿರ್ದೇಶನ ನೀಡಿತಲ್ಲದೆ, ವಿಚಾರಣೆಯನ್ನು ಆಗಸ್ಟ್‌ 7ಕ್ಕೆ ನಿಗದಿ ಪಡಿಸಿತು.

ADVERTISEMENT

ರಾಜ್ಯ ಸರ್ಕಾರವು ಗೋಕರ್ಣದ ದೇವಸ್ಥಾನವನ್ನು ರಾಮಚಂದ್ರಾಪುರ ಮಠದ ಸುಪರ್ದಿಗೆ ವಹಿಸಿದ ನಂತರ ಪೂಜಾ ಕೈಂಕರ್ಯಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ದೂರಿ ಅರ್ಚಕರು 2014ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.ದೇವಾಲಯದ ಆಡಳಿತಾಧಿಕಾರಿ ಮತ್ತಿತರರು ಉಪಾಧಿವಂತರ ಪೂಜಾ ಅವಕಾಶ ನಿರಾಕರಿಸುವ ಮೂಲಕ ನ್ಯಾಯಾಲಯದ ಘನತೆ ಮತ್ತು ಗಾಂಭೀರ್ಯಕ್ಕೆ ಚ್ಯುತಿ ತರುವ ಉದ್ದೇಶ ಹೊಂದಿದ್ದಾರೆ ಎಂಬ ಅಭಿಪ್ರಾಯದೊಂದಿಗೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಸೂಚಿಸಿ ಹೈಕೋರ್ಟ್‌ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.