ADVERTISEMENT

ನ್ಯಾಯಮಂಡಳಿ ಸದಸ್ಯರಿಗಿಲ್ಲ ಸೌಲಭ್ಯ: ಸುಪ್ರೀಂ ಕೋರ್ಟ್ ಕಿಡಿ

ಸೌಕರ್ಯ ಕಲ್ಪಿಸಲು ಸಾಧ್ಯವಾಗದಿದ್ದರೆ ಸಂಸ್ಥೆಗಳನ್ನೇ ರದ್ದುಪಡಿಸಿ: ಸುಪ್ರೀಂ ಕೋರ್ಟ್‌

ಪಿಟಿಐ
Published 16 ಸೆಪ್ಟೆಂಬರ್ 2025, 15:20 IST
Last Updated 16 ಸೆಪ್ಟೆಂಬರ್ 2025, 15:20 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ‘ನ್ಯಾಯಮಂಡಳಿಗಳ ಸದಸ್ಯರಿಗೆ ಸೌಲಭ್ಯ ಒದಗಿಸಲು ಸಾಧ್ಯವಾಗದಿದ್ದರೆ ಅಂತಹ ಎಲ್ಲ ಅರೆ ನ್ಯಾಯಾಂಗ ಸಂಸ್ಥೆಗಳನ್ನು ರದ್ದುಪಡಿಸಿ, ಅಲ್ಲಿನ ಎಲ್ಲ ಪ್ರಕರಣಗಳನ್ನು ಹೈಕೋರ್ಟ್‌ಗಳಿಗೆ ವರ್ಗಾಯಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿದೆ.

‘ವಿವಿಧ ನ್ಯಾಯಮಂಡಳಿಗಳಲ್ಲಿ ಹುದ್ದೆಗಳನ್ನು ವಹಿಸಿಕೊಳ್ಳಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು ನಿರಾಸಕ್ತಿ ತೋರಲು ಅಲ್ಲಿನ ಸೌಲಭ್ಯಗಳ ಕೊರತೆಯೇ ಕಾರಣ’ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠ ಹೇಳಿದೆ.

‘ನ್ಯಾಯಮೂರ್ತಿಗಳು ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹಾಜರಾದರೂ ಏಕೆ ಅಧಿಕಾರ ವಹಿಸಿಕೊಳ್ಳುತ್ತಿಲ್ಲ? ನ್ಯಾಯಮಂಡಳಿ ಸದಸ್ಯರಾಗುವುದೆಂದರೆ ಏನು ಎಂಬ ವಾಸ್ತವವನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಹೈಕೋರ್ಟ್‌ಗಳ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಅಥವಾ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ನ್ಯಾಯಮಂಡಳಿಗಳ ಅಧ್ಯಕ್ಷರಾಗಿದ್ದು, ಅವರಿಗೆ ಯಾವುದೇ ಸೌಲಭ್ಯ ಒದಗಿಸಿಲ್ಲ. ನೀವು ನ್ಯಾಯಮಂಡಳಿಗಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದೀರಿ? ನಿಮ್ಮದೇ ತಪ್ಪು’ ಎಂದು ಪೀಠವು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ.

ADVERTISEMENT

‘ಖರ್ಚು–ವೆಚ್ಚಗಳಿಗೆ ಹಣ ನೀಡುತ್ತಿಲ್ಲ. ಸ್ಟೇಷನರಿ ವಸ್ತು, ಮನೆ, ಕಾರು ಹೀಗೆ... ಪ್ರತಿಯೊಂದಕ್ಕೂ ನಿಮ್ಮ ಬಳಿ ಭಿಕ್ಷೆ ಬೇಡುವ ಸ್ಥಿತಿ ಇದೆ. ನ್ಯಾಯಮಂಡಳಿ ಅಧ್ಯಕ್ಷರಿಗೆ ಅತ್ಯಂತ ಕೆಟ್ಟ ಕಾರು ನೀಡಲಾಗಿದೆ’ ಎಂದು ಪೀಠವು ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮ್‌ಜಿತ್‌ ಬ್ಯಾನರ್ಜಿ ಅವರಿಗೆ ಹೇಳಿತು.

‘ನೇಮಕಾತಿ ಆದೇಶದ ನಂತರ ನಿವೃತ್ತ ನ್ಯಾಯಮೂರ್ತಿಗಳು ವಸತಿ ಮತ್ತು ಇತರ ಸೌಲಭ್ಯಗಳ ಬಗ್ಗೆ ಬಹಳಷ್ಟು ಅನಿಶ್ಚಿತತೆ ಎದುರಿಸುತ್ತಿದ್ದಾರೆ. ಇನ್ನಾದರೂ, ಈ ಹುದ್ದೆಗಳನ್ನು ಅಲಂಕರಿಸುವವರನ್ನು ಘನತೆಯಿಂದ ನಡೆಸಿಕೊಳ್ಳಿ’ ಎಂದು ಪೀಠ ಹೇಳಿದೆ.

ನ್ಯಾಯಮಂಡಳಿಗಳಲ್ಲಿನ ಖಾಲಿ ಹುದ್ದೆಗಳ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಬಾರ್ ಅಸೋಸಿಯೇಷನ್ ​​ಪಶ್ಚಿಮ ವಲಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

‘ನೇಮಕಾತಿ ಆದೇಶ ಪತ್ರ ಪಡೆದಿದ್ದ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ಅಧಿಕಾರ ವಹಿಸಿಕೊಂಡಿಲ್ಲ. ನೇಮಕಾತಿ ಪ್ರಕ್ರಿಯೆಯನ್ನು ಹೊಸದಾಗಿ ಪ್ರಾರಂಭಿಸಬೇಕಿದ್ದು, ಇದಕ್ಕೆ ಸಮಯ ಹಿಡಿಯಲಿದೆ’ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ನೇಮಕಾತಿಯನ್ನು ನಿರಾಕರಿಸಿದ ನ್ಯಾಯಮೂರ್ತಿಗಳ ನಡವಳಿಕೆಗೆ ಬೇಸರ ವ್ಯಕ್ತಪಡಿಸಿದ ಪೀಠವು, ‘ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನಡವಳಿಕೆಯೂ ಸರಿಯಲ್ಲ’ ಎಂದು ಹೇಳಿದೆ.

‘ಹೊಸ ಸದಸ್ಯರನ್ನು ನೇಮಿಸುವವರೆಗೆ ಹಾಲಿ ಸದಸ್ಯರು ನಿವೃತ್ತಿಯ ನಂತರವೂ ಮುಂದುವರಿಯಲು ಅವಕಾಶ ನೀಡಬೇಕು’ ಎಂಬ ಕೇಂದ್ರದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ವಿಚಾರಣೆಯನ್ನು ಡಿ.1ಕ್ಕೆ ಮುಂದೂಡಿದೆ.

ಸಮಿತಿ ರಚಿಸಲು ನಿರ್ದೇಶನ

‘ನ್ಯಾಯಮಂಡಳಿಗಳಲ್ಲಿರುವ ಲೋಪದೋಷಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸಲು, ಸೌಲಭ್ಯ ಕಲ್ಪಿಸಲು ಆಡಳಿತ ಸುಧಾರಣೆ ಮತ್ತು ತರಬೇತಿ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳ ಸಮಿತಿಯನ್ನು ರಚಿಸಬೇಕು. ಮೂಲಸೌಕರ್ಯ ಒದಗಿಸಲು ಏಕರೂಪದ ವಿಧಾನವನ್ನು ಅಳವಡಿಸಿಕೊಳ್ಳಬೇಕು’ ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಈ ವಿಷಯವನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸುವುದಾಗಿ ವಿಕ್ರಮ್‌ಜಿತ್‌ ಬ್ಯಾನರ್ಜಿ ಪೀಠಕ್ಕೆ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.