ADVERTISEMENT

ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಿಗೆ ಬಡ್ತಿ: ಶಿಫಾರಸು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 20:12 IST
Last Updated 30 ಅಕ್ಟೋಬರ್ 2018, 20:12 IST

ನವದೆಹಲಿ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಹುದ್ದೆಗೆ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಪಟ್ನಾ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎಂ.ಆರ್‌.ಶಾ, ನ್ಯಾಯಮೂರ್ತಿಗಳಾದ ಹೇಮಂತ ಗುಪ್ತಾ (ಮಧ್ಯಪ್ರದೇಶ ಹೈಕೋರ್ಟ್‌), ಆರ್.ಸುಭಾಷ್‌ ರೆಡ್ಡಿ (ಗುಜರಾತ್‌) ಹಾಗೂ ತ್ರಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಜಯ್‌ ರಸ್ತೋಗಿ ಅವರಿಗೆ ಬಡ್ತಿ ನೀಡಲು ಮಂಗಳವಾರ ನಡೆದ ಕೊಲಿಜಿಯಂ ಸಭೆ ನಿರ್ಧರಿಸಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ, ನ್ಯಾಯಮೂರ್ತಿಗಳಾದ ಮದನ್‌ ಬಿ.ಲೋಕೂರ್, ಕುರಿಯನ್‌ ಜೋಸೆಫ್‌, ಎ.ಕೆ.ಸಿಕ್ರಿ ಹಾಗೂ ಎಸ್‌.ಎ.ಬೊಬ್ಡೆ ಅವರನ್ನು ಒಳಗೊಂಡ ಕೊಲಿಜಿಯಂ ಮಾಡಿರುವ ಈ ಶಿಫಾರಸಿಗೆ ಕೇಂದ್ರ ಸರ್ಕಾರ ಯಾವುದೇ ಆಕ್ಷೇಪ ಮಾಡದಿದ್ದರೆ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಸಂಖ್ಯೆ 28ಕ್ಕೆ ಏರಿಕೆಯಾಗಲಿದೆ. ಸುಪ್ರೀಂ ಕೋರ್ಟ್‌ಗೆ ಮಂಜೂರಾದ ನ್ಯಾಯಮೂರ್ತಿಗಳ ಒಟ್ಟು ಹುದ್ದೆಗಳ ಸಂಖ್ಯೆ 31.

ADVERTISEMENT

ಫೋನ್‌ ಬದಲು ಸಾಬೂನು ರವಾನೆ: ಅಮೆಜಾನ್ ವಿರುದ್ಧ ದೂರು

ನೋಯ್ಡಾ: ‘ಫೋನ್‌ ಕಳುಹಿಸುವಂತೆ ಬೇಡಿಕೆ ಸಲ್ಲಿಸಿದ್ದ ನನಗೆ ಸಾಬೂನು ಕಳುಹಿಸಲಾಗಿದೆ’ ಎಂದು ದೂರಿರುವ ಗ್ರಾಹಕರೊಬ್ಬರು, ಈ ಸಂಬಂಧ ಇ–ಕಾಮರ್ಸ್‌ ಸಂಸ್ಥೆ ಅಮೆಜಾನ್‌ ವಿರುದ್ಧ ದೂರು ಸಲ್ಲಿಸಿದ್ದಾರೆ.

ಗ್ರಾಹಕ ನೀಡಿದ ದೂರಿನನ್ವಯ ಗ್ರೇಟರ್‌ ನೋಯ್ಡಾದ ಬಿಸ್ರಾಖ್‌ ಠಾಣೆ ಪೊಲೀಸರು ಅಮೆಜಾನ್‌ನ ಭಾರತ ಘಟಕದ ಮುಖ್ಯಸ್ಥ ಅಮಿತ್‌ ಅಗ್ರವಾಲ್‌, ಸರಕು ಸಾಗಣೆ ಸಂಸ್ಥೆ ದರ್ಶಿತಾ ಪ್ರೈ.ಲಿ.ನ ನಿರ್ದೇಶಕರಾದ ಪ್ರದೀಪ್‌ಕುಮಾರ್, ರವೀಶ್‌ ಅಗ್ರವಾಲ್‌ ಹಾಗೂ ಪಾರ್ಸೆಲ್‌ ತಲುಪಿಸಿದ ಅನಿಲ್‌ ಎಂಬ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಫೋನ್‌ ಬದಲಾಗಿ ಸಾಬೂನು ಇರುವ ಪೊಟ್ಟಣವನ್ನು ಗ್ರಾಹಕರಿಗೆ ನೀಡಲಾಗಿದೆ’ ಎಂಬುದನ್ನು ಅಮೆಜಾನ್‌ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ‘ದೇಶದ ಅತಿದೊಡ್ಡ ಆನ್‌ಲೈನ್‌ ಮಾರುಕಟ್ಟೆಯಾಗಿರುವ ಅಮೆಜಾನ್‌ ಇಂತಹ ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ಗ್ರಾಹಕರಿಗೆ ಹಣ ಮರುಪಾವತಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.