ADVERTISEMENT

ಮುಕೇಶ್ ಅಂಬಾನಿ ಕುಟುಂಬಕ್ಕೆ ಭದ್ರತೆ ಮುಂದುವರಿಸಲು ಕೇಂದ್ರಕ್ಕೆ ಸುಪ್ರೀಂ ಅನುಮತಿ

ಪಿಟಿಐ
Published 22 ಜುಲೈ 2022, 10:08 IST
Last Updated 22 ಜುಲೈ 2022, 10:08 IST
ಮಗ ಆಕಾಶ್ ಜತೆ ಉದ್ಯಮಿ ಮುಕೇಶ್ ಅಂಬಾನಿ
ಮಗ ಆಕಾಶ್ ಜತೆ ಉದ್ಯಮಿ ಮುಕೇಶ್ ಅಂಬಾನಿ   

ನವದೆಹಲಿ: ಉದ್ಯಮಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬದವರಿಗೆ ಮುಂಬೈಯಲ್ಲಿ ಭದ್ರತೆ ನೀಡುತ್ತಿರುವುದನ್ನು ಮುಂದುವರಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ (ಪಿಐಎಲ್) ಸಂಬಂಧಿಸಿ ತ್ರಿಪುರಾ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ, ನ್ಯಾಯಮೂರ್ತಿ ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿತು.

ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬದವರಿಗೆ ಮುಂಬೈಯಲ್ಲಿ ಭದ್ರತೆ ಒದಗಿಸುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಪಿಐಎಲ್‌ಗೆ ಸಂಬಂಧಿಸಿ ತ್ರಿಪುರಾ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಜೂನ್ 29ರಂದು ಸುಪ್ರೀಂ ಕೋರ್ಟ್‌ನ ರಜಾ ಕಾಲದ ಪೀಠ ತಡೆ ನೀಡಿತ್ತು.

ಮುಂಬೈಯಲ್ಲಿ ವ್ಯಕ್ತಿಗಳಿಗೆ ನೀಡಿದ ಭದ್ರತೆಯು ತ್ರಿಪುರಾಕ್ಕೆ ಸಂಬಂಧಿಸಿದ ವಿಚಾರವಲ್ಲ ಎಂದು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.

2021ರ ಮಾರ್ಚ್‌ನಲ್ಲಿ ಸ್ಫೋಟಕ ತುಂಬಿದ್ದ ಎಸ್‌ಯುವಿ ವಾಹನ ದಕ್ಷಿಣ ಮುಂಬೈಯಲ್ಲಿರುವ ಅಂಬಾನಿ ನಿವಾಸದ ಸಮೀಪ ಪತ್ತೆಯಾಗಿತ್ತು. ಅದೇ ವರ್ಷ ನವೆಂಬರ್‌ನಲ್ಲಿ ಅವರ ನಿವಾಸದ ಸುತ್ತ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಕಂಡುಬಂದಿತ್ತು. ಬಳಿಕ ಅಂಬಾನಿ ಕುಟುಂಬದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.