
ನವದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್ ಅನುಭವಿಸುತ್ತಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಹೈಕೋರ್ಟ್ ತೀರ್ಪಿಗೆ ತಡೆ ನೀಡುವಂತೆ ಕೋರಿ ವಕೀಲರಾದ ಅಂಜಲೆ ಪಟೇಲ್ ಮತ್ತು ಪೂಜಾ ಶಿಲ್ಪಕರ್ ಮೇಲ್ಮನವಿ ಸಲ್ಲಿಸಿದ್ದಾರೆ.
‘ವಿಚಾರಣಾ ನ್ಯಾಯಾಲಯವು ಸೆಂಗರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಲ್ಲದೆ, ತಮ್ಮ ಸಹಜ ಜೀವನದ ಉಳಿದ ಅವಧಿಯವರೆಗೆ ಜೈಲಿನಲ್ಲಿಯೇ ಇರಬೇಕು ಎಂದು ಆದೇಶಿಸಿತ್ತು. ಆದರೆ ಈ ಪ್ರಕರಣದ ನೈಜ ಸತ್ಯವನ್ನು ಪರಿಗಣಿಸದೆ ಹೈಕೋರ್ಟ್ ತೀರ್ಪು ನೀಡಿದೆ’ ಎಂದು ಅವರು ವಾದಿಸಿದ್ದಾರೆ.
‘ಸೆಂಗರ್ ಗಂಭೀರ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಅತ್ಯಾಚಾರದಂತಹ ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. ಅಂಥವರಿಗೆ ನೀಡಲಾದ ಶಿಕ್ಷೆಯನ್ನು ಅಮಾನತುಗೊಳಿಸಿ, ಜಾಮೀನು ನೀಡುವ ಮೂಲಕ ಹೈಕೋರ್ಟ್ ಗಂಭೀರ ತಪ್ಪುಗಳನ್ನು ಮಾಡಿದೆ’ ಎಂದು ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
‘ಅಪರಾಧಿಯು ಆರ್ಥಿಕ ಮತ್ತು ರಾಜಕೀಯವಾಗಿ ಪ್ರಭಾವಿ ವ್ಯಕ್ತಿ. ತೋಳ್ಬಲದಿಂದ ಬೆದರಿಸುವ ಹಿನ್ನೆಲೆ ಹೊಂದಿದ್ದಾರೆ. ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವು ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ. ಇಷ್ಟೆಲ್ಲ ಕ್ರಿಮಿನಲ್ ಪ್ರವೃತ್ತಿ ಹೊಂದಿರುವ ವ್ಯಕ್ತಿಯ ಶಿಕ್ಷೆ ಅಮಾನತುಗೊಳಿಸಿರುವುದು ಸರಿಯಿಲ್ಲ’ ಎಂದು ಉಲ್ಲೇಖಿಸಿದ್ದಾರೆ.
ಅಪರಾಧ ನಡೆಯುವ ಸಂದರ್ಭದಲ್ಲಿ ಸೆಂಗಲ್ ಶಾಸಕರಾಗಿದ್ದರು. ಅಂದರೆ ‘ಸಾರ್ವಜನಿಕ ಸೇವಕ’ರಾಗಿದ್ದರು. ಆದರೆ 1988ರ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 2(ಸಿ) ಮತ್ತು ಇತರ ನಿಬಂಧನೆಗಳ ಅಡಿಯಲ್ಲಿ ಪರಿಗಣಿಸಲಾಗಿರುವ ‘ಸಾರ್ವಜನಿಕ ಸೇವಕ’ ಪದದ ಶಾಸನಬದ್ಧ ವ್ಯಾಖ್ಯಾನವನ್ನು ಹೈಕೋರ್ಟ್ ತಪ್ಪಾಗಿ ಅರ್ಥೈಸಿಕೊಂಡು ತೀರ್ಪು ನೀಡಿದೆ. ಇದು ಶಾಸನದ ಉದ್ದೇಶವನ್ನೇ ದುರ್ಬಲಗೊಳಿಸುತ್ತದೆ ಎಂದು ವಾದಿಸಿದ್ದಾರೆ.
ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸೆಂಗರ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಇತ್ಯರ್ಥ ಆಗುವರೆಗೆ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ ದೆಹಲಿ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಪ್ರಕರಣದ ಶಿಕ್ಷೆ ಅಮಾನತುಗೊಂಡಿದ್ದರೂ ಸಂತ್ರಸ್ತೆ ತಂದೆಯ ಕಸ್ಟಡಿ ಸಾವು ಪ್ರಕರಣದಲ್ಲಿ ಸೆಂಗರ್‌ಗೆ 10 ವರ್ಷಗಳ ಶಿಕ್ಷೆಯಾಗಿದೆ. ಹೀಗಾಗಿ ಅವರು ಜೈಲಿನಲ್ಲಿಯೇ ಇರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.