ADVERTISEMENT

ಶಬರಿಮಲೆ: ಪರಿಶೀಲನೆಗೆ ‘ಸುಪ್ರೀಂ’ ನಿರ್ಧಾರ

ಪಿಟಿಐ
Published 3 ಫೆಬ್ರುವರಿ 2020, 18:16 IST
Last Updated 3 ಫೆಬ್ರುವರಿ 2020, 18:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿವಿಧ ಧರ್ಮ ಗಳಲ್ಲಿ ಮಹಿಳೆಯರು ಎದುರಿಸುತ್ತಿ ರುವ ತಾರತಮ್ಯಕ್ಕೆ ಸಂಬಂಧಿಸಿ, ಧರ್ಮದ ಆಚರಣೆಯ ಹಕ್ಕುಗಳ ವ್ಯಾಪಕ ವಿಷಯಗಳನ್ನು ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರ್ಧರಿಸಿದೆ.

ಶಬರಿಮಲೆ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸಿದ ತೀರ್ಪಿನ ಮರುಪರಿಶೀಲನೆ ಅರ್ಜಿಯ ವಿಚಾರಣೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಧಾರ್ಮಿಕ ನೆಲೆಯಲ್ಲಿ ಮಹಿಳೆಯರ ವಿರುದ್ಧದ ತಾರತಮ್ಯದ ಯಾವೆಲ್ಲ ಅಂಶಗಳನ್ನು ಪರಿಶೀಲನೆಗೆ ಒಳ ಪಡಿಸಬೇಕು ಎಂಬುದನ್ನು ನಿರ್ಧರಿಸ ಲಾಗುವುದು ಎಂದು ಮುಖ್ಯ ನ್ಯಾಯ ಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಹೇಳಿದೆ.

ADVERTISEMENT

ವಿಚಾರಣೆಯ ದಿನಾಂಕ ನಿಗದಿ ಮತ್ತು ಪರಿಶೀಲನೆಗೆ ಒಳಪಡಿಸುವ ಅಂಶಗಳ ಬಗ್ಗೆ ಇದೇ 6ರಂದು ಚರ್ಚಿಸಲಾಗುವುದು ಎಂದು ಪೀಠ ತಿಳಿಸಿದೆ.

ವಿಸ್ತೃತ ಪೀಠವು ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸುವಾಗ, ವಿಚಾರಣೆ ನಡೆಸುವ ವಿಷಯದ ವ್ಯಾಪ್ತಿ ಹಿಗ್ಗಿಸಲು ಅವಕಾಶ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಪೀಠ ಹೇಳಿದೆ. ಆದರೆ, ವಿಸ್ತೃತ ಪೀಠದ ವಿಚಾರಣೆಯು ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಅವಕಾಶ ಇಲ್ಲ ಎಂದು ಹಿರಿಯ ವಕೀಲರಾದ ಫಾಲಿ ಎಸ್‌. ನರಿಮನ್‌, ಕಪಿಲ್ ಸಿಬಲ್‌, ಶ್ಯಾಮ್‌ ದಿವಾನ್‌ ಮತ್ತು ರಾಕೇಶ್‌ ದ್ವಿವೇದಿ ವಾದಿಸಿದರು.

ಅರ್ಜಿ ವಿಚಾರಣೆ ವೇಳೆ ಪೀಠದ ವ್ಯಾಪ್ತಿ ಸೀಮಿತವಾದುದು. ಮರುಪರಿಶೀಲನೆಗೆ ಒಳಪಡುವ ತೀರ್ಪು ಲೋಪ ದಿಂದ ಕೂಡಿದೆಯೇ ಎಂಬುದನ್ನು ನೋಡುವುದಷ್ಟೇ ಪೀಠದ ಕೆಲಸ ಎಂದು ವಕೀಲರು ವಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.