ಸಿಸಿ ಟಿವಿ ಕ್ಯಾಮೆರಾ
ನವದೆಹಲಿ: ದೇಶದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೇಲುಸ್ತುವಾರಿ ಕುರಿತು ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಮಾನವನ ಹಸ್ತಕ್ಷೇಪವಿಲ್ಲದ ಏಕೀಕೃತ ನಿಯಂತ್ರಣ ಕೊಠಡಿ ಸ್ಥಾಪಿಸಿ, ಅವುಗಳ ಮೇಲ್ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.
ಠಾಣೆಗಳಲ್ಲಿ ನಿಷ್ಕ್ರಿಯ ಸಿ.ಸಿ.ಟಿವಿ ಕ್ಯಾಮೆರಾಗಳ ಕುರಿತು ಸೆ.26ರಂದು ಆದೇಶ ಪ್ರಕಟಿಸುವುದಾಗಿ ನ್ಯಾಯಮೂರ್ತಿ ವಿಕ್ರಮ್‌ನಾಥ್ ಹಾಗೂ ಸಂದೀಪ್ ಮೆಹ್ತಾ ಅವರ ನ್ಯಾಯಪೀಠವು ತಿಳಿಸಿದೆ.
‘ಕ್ಯಾಮೆರಾಗಳ ಮೇಲುಸ್ತುವಾರಿಯೇ ಮುಖ್ಯ ವಿಷಯವಾಗಿದೆ’ ಎಂದು ಪೀಠವು ಈ ವೇಳೆ ಅಭಿಪ್ರಾಯಪಟ್ಟಿತು.
‘ಮನುಷ್ಯನ ಹಸ್ತಕ್ಷೇಪವಿಲ್ಲದ ನಿಯಂತ್ರಣ ಕೊಠಡಿ ಕುರಿತು ನಾವು ಯೋಜಿಸುತ್ತಿದ್ದೇವೆ. ಎಲ್ಲ ವಿಡಿಯೊಗಳನ್ನು ನಿಯಂತ್ರಣ ಕೊಠಡಿಗೆ ರವಾನಿಸುವಂತಿರಬೇಕು. ಒಂದೊಮ್ಮೆ ಯಾವುದೇ ಕ್ಯಾಮೆರಾ ಸ್ಥಗಿತಗೊಂಡರೆ, ತಕ್ಷಣವೇ ಎಚ್ಚರಿಸಬೇಕು. ಈ ರೀತಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಉಳಿದಂತೆ ಬೇರೆ ದಾರಿಯಿಲ್ಲ’ ಎಂದು ನ್ಯಾಯಮೂರ್ತಿ ಮೆಹ್ತಾ ತಿಳಿಸಿದರು.
2020ರ ಡಿಸೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ ಪ್ರತ್ಯೇಕ ವಿಷಯದಲ್ಲಿ ‘ಅಮಿಕಸ್ ಕ್ಯೂರಿ’ ಆಗಿ ನೇಮಕಗೊಂಡಿದ್ದ ಹಿರಿಯ ವಕೀಲ ಸಿದ್ದಾರ್ಥ ದಾವೆ ಅವರ ವಾದವನ್ನು ನ್ಯಾಯಪೀಠವು ಪರಿಗಣಿಸಿತು.
ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ), ಜಾರಿ ನಿರ್ದೇಶನಾಲಯ (ಇ.ಡಿ) ಕೇಂದ್ರಿಯ ತನಿಖಾ ಸಂಸ್ಥೆ (ಎನ್‌ಐಎ) ಸೇರಿದಂತೆ ಎಲ್ಲ ತನಿಖಾ ಕಚೇರಿಗಳಲ್ಲಿ ಸಿ.ಸಿ.ಟಿವಿಗಳನ್ನು ಕಡ್ಡಾಯವಾಗಿ ಅಳವಡಿಸಬೇಕು, ರೆಕಾರ್ಡಿಂಗ್ ಉಪಕರಣಗಳನ್ನು ಅಳವಡಿಸಬೇಕು ಎಂದು ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ಆದೇಶದಲ್ಲಿ ತಿಳಿಸಿತ್ತು. ನ್ಯಾಯಾಲಯದ ಸೂಚನೆ ಹೊರತಾಗಿಯೂ ಎನ್‌ಐಎ, ಇ.ಡಿ., ಸಿಬಿಐ ಸೇರಿದಂತೆ ಮೂರರಿಂದ ನಾಲ್ಕು ಸಂಸ್ಥೆಗಳು ತಮ್ಮ ನಿರ್ದೇಶನ ಪಾಲಿಸಿಲ್ಲ ಎಂದು ಸಿದ್ದಾರ್ಥ ದಾವೆ ಅವರು ನ್ಯಾಯಪೀಠದ ಎದುರು ಬೇಸರ ವ್ಯಕ್ತಪಡಿಸಿದರು.
ರಾಜಸ್ಥಾನದಲ್ಲಿ ಕಳೆದ ಎಂಟು ತಿಂಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 7 ಪ್ರಕರಣಗಳು ಉದಯಪುರದಲ್ಲಿಯೇ ವರದಿಯಾಗಿದೆ ಎಂದು ಮಾಧ್ಯಮಗಳ ವರದಿ ಆಧರಿಸಿ, ಸೆ.4ರಂದು ಸುಪ್ರೀಂಕೋರ್ಟ್, ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡು ಈ ಸೂಚನೆ ನೀಡಿದೆ.
ಐಐಟಿಗಳ ನೆರವು ಪಡೆಯಲು ಸಲಹೆ
ಸ್ವತಂತ್ರ ಸಂಸ್ಥೆಯಿಂದ ಪ್ರತಿ ಪೊಲೀಸ್ ಠಾಣೆಯಲ್ಲೂ ತಪಾಸಣೆ ನಡೆಸುವಂತಿರಬೇಕು ಎಂದು ತಿಳಿಸಿರುವ ನ್ಯಾಯಪೀಠ, ಈ ಸಮಸ್ಯೆ ಪರಿಹಾರ ಹುಡುಕಲು ಕೆಲವು ಭಾರತೀಯ ತಂತ್ರಜ್ಞಾನ ಸಂಸ್ಥೆಗಳನ್ನು (ಐಐಟಿ) ಒಳಗೊಳ್ಳಲು ನಾವು ಯೋಚಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (ಎ.ಐ) ಆಧರಿಸಿ ನಿರ್ದಿಷ್ಟ ಪ್ರದೇಶದ ಸಿ.ಸಿ.ಟಿವಿ ಕ್ಯಾಮೆರಾಗಳ ವಿಡಿಯೊಗಳ ಮೇಲುಸ್ತುವಾರಿ ವಹಿಸಬಹುದು. ಈ ಮೂಲಕ, ಮನುಷ್ಯರ ಹಸ್ತಕ್ಷೇಪವಿಲ್ಲದಂತೆ ನೋಡಿಕೊಳ್ಳಬಹುದು.
ಒಂದೊಮ್ಮೆ ಕ್ಯಾಮೆರಾಗಳು ತಕ್ಷಣವೇ ಸ್ಥಗಿತಗೊಂಡರೆ, ಸಂಬಂಧಿಸಿದ ಕಾನೂನು ಸೇವಾ ಪ್ರಾಧಿಕಾರ ಅಥವಾ ಮೇಲುಸ್ತುವಾರಿ ಸಂಸ್ಥೆಗೆ ಮಾಹಿತಿ ಕಳುಹಿಸುವಂತಿರಬೇಕು‘ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.