ADVERTISEMENT

2 ತಿಂಗಳ ಮೊದಲೇ ಹೈಕೋರ್ಟ್‌ ಸಿ.ಜೆಗಳ ವರ್ಗಾವಣೆ: ಕೊಲಿಜಿಯಂನಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 15:40 IST
Last Updated 27 ಫೆಬ್ರುವರಿ 2026, 15:40 IST
...
...   

ನವದೆಹಲಿ: ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಲು ಆಯ್ಕೆ ಮಾಡಿರುವ ನ್ಯಾಯಾಧೀಶರನ್ನು ಹಾಲಿ ಮುಖ್ಯ ನ್ಯಾಯಮೂರ್ತಿಗಳ ನಿವೃತ್ತಿಗೂ ಮುಂಚೆಯೇ ಹೈಕೋರ್ಟ್‌ಗೆ ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್‌ ಕೊಲಿಜಿಯಂನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಹಾಲಿ ನ್ಯಾಯಮೂರ್ತಿಗಳ ನಿವೃತ್ತಿಗೂ 2 ತಿಂಗಳ ಮುಂಚೆಯೇ ನ್ಯಾಯಾಧೀಶರು ಹೈಕೋರ್ಟ್‌ಗೆ ವರ್ಗಾವಣೆಯಾದರೆ, ಅಲ್ಲಿನ ವ್ಯವಹಾರಗಳನ್ನು ಚೆನ್ನಾಗಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ, ಹಾಲಿ ನ್ಯಾಯಮೂರ್ತಿಯ ನಿವೃತ್ತಿಯ ಬಳಿಕ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ನೇತೃತ್ವದ ಕೊಲಿಜಿಯಂ ತಿಳಿಸಿದೆ.

ನ್ಯಾಯಾಂಗದ ಆಡಳಿತ ದಕ್ಷತೆ ಮತ್ತು ಗುಣಮಟ್ಟವನ್ನು ವೃದ್ಧಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ ಕೊಲಿಜಿಯಂ, ಪಂಜಾಬ್‌–ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ಲಿಸಾ ಗಿಲ್‌ ಅವರನ್ನು ಆಂಧ್ರ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಶಿಫಾರಸು ಮಾಡಿದೆ. ಜತೆಗೆ ಆಂಧ್ರ ಪ್ರದೇಶ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನಿವೃತ್ತಿಯ ದಿನಾಂಕದಂದೇ ಲಿಸಾ ಅವರ ನೇಮಕದ ದಿನಾಂಕ ನಿಗದಿಪಡಿಸಲು ನಿರ್ದೇಶಿಸಿದೆ. 

ADVERTISEMENT

ಫೆ.26ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಕೇರಳ ಹೈಕೋರ್ಟ್‌ನ ನ್ಯಾಯಾಧೀಶರಾದ ಸುಶ್ರುತ್‌ ಅರವಿಂದ್‌ ಧರ್ಮಾಧಿಕಾರಿ ಅವರನ್ನು ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಶಿಫಾರಸು ಮಾಡಿದೆ. ಜತೆಗೆ 9 ಮಂದಿ ವಕೀಲರನ್ನುಚಪಟ್ನಾ ಹೈಕೋರ್ಟ್‌ಗೆ ನ್ಯಾಯಾಧೀಶರನ್ನಾಗಿ ನೇಮಿಸುವ ‍ಪ್ರಸ್ತಾಪಕ್ಕೂ ಕೊಲಿಜಿಯಂ ಅನುಮೋದನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.