ನವದೆಹಲಿ: ‘ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿಗಳ ಮಾತುಗಳನ್ನು ತಪ್ಪು ಅರ್ಥ ಬರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರು ಮಂಗಳವಾರ ಕಳವಳ ವ್ಯಕ್ತಪಡಿಸಿದರು.
ಮಂಗಳವಾರ ಅರ್ಜಿಯೊಂದರ ವಿಚಾರಣೆ ನಡೆಸುತ್ತಿದ್ದ ವೇಳೆ ಸಿಜೆಐ ಗವಾಯಿ ಅವರು ಕೆಲವು ದಿನಗಳ ಹಿಂದೆ ನಡೆದಿದ್ದ ಘಟನೆಯೊಂದನ್ನು ನೆನಪಿಸಿಕೊಂಡರು.
‘ಪ್ರಕರಣವೊಂದಕ್ಕೆ ಸಂಬಂಧಿಸಿ ವಿಚಾರಣೆಯ ವೇಳೆ ನನ್ನ ಸಹೋದರ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿಗೆ ಏನೋ ಹೇಳುವುದಿತ್ತು. ನಾನು ಅವರನ್ನು ತಡೆದೆ. ಇಲ್ಲದೇ ಇದ್ದಿದ್ದರೆ, ಅವರ ಹೇಳಿಕೆಯನ್ನು ತಪ್ಪು ಅರ್ಥ ಬರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿತ್ತು’ ಎಂದರು.
‘ನಿಮ್ಮ ಅಭಿಪ್ರಾಯವನ್ನು ನನ್ನ ಕಿವಿಯಲ್ಲಿ ಮಾತ್ರವೇ ಹೇಳಿ ಎಂದು ನಾನು ಅವರಲ್ಲಿ ವಿನಂತಿಸಿಕೊಂಡಿದ್ದೆ’ ಎಂದರು.
ಸೋಮವಾರವಷ್ಟೇ ಸಿಜೆಐ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಅವರು ಶೂ ಎಸೆಯುವ ಯತ್ನ ನಡೆಸಿದ್ದರು. ಭಗ್ನಗೊಂಡಿದ್ದ ವಿಷ್ಣು ಮೂರ್ತಿಯನ್ನು ಮರುಸ್ಥಾಪಿಸುವ ಕುರಿತ ಅರ್ಜಿಯ ವಿಚಾರಣೆ ವೇಳೆ ಸಿಜೆಐ ಗವಾಯಿ ಅವರು ಆಡಿದ್ದ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ಇದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ‘ಗವಾಯಿ ಅವರ ಹೇಳಿಕೆಯು ನನಗೆ ಅಸಮಾಧಾನ ತರಿಸಿತ್ತು’ ಎಂದು ರಾಕೇಶ್ ಹೇಳಿದ್ದರು.
ವಿಕಸಿತ ಭಾರತ ಹೇಗಿರಲಿದೆ ಎನ್ನುವುದಕ್ಕೆ ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ್ದೇ ಸ್ಪಷ್ಟ ಚಿತ್ರಣ ನೀಡುತ್ತದೆ. ತನಗೆ ಏನೂ ಆಗುವುದಿಲ್ಲ ಎನ್ನುವ ಅತೀವ ಭರವಸೆ ಇದ್ದೇ ವಕೀಲ ಇಂಥ ಕೃತ್ಯ ಎಸಗಿದ್ದಾರೆಮೆಹಬೂಬಾ ಮುಫ್ತಿ ಪಿಡಿಪಿ ಮುಖ್ಯಸ್ಥೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗದ ಘನತೆ ಸ್ವಾತಂತ್ರ್ಯ ಬಹಳ ಮುಖ್ಯ. ಇಂಥ ವ್ಯವಸ್ಥೆ ಮೇಲೆ ಕೈ ಎತ್ತುವುದು ಎಂದರೆ ಅದು ಸಂವಿಧಾನದ ವಿರುದ್ಧ ನಡೆದಂತೆಹೇಮಂತ್ ಸೋರೆನ್ ಜಾರ್ಖಂಡ್ ಮುಖ್ಯಮಂತ್ರಿ
ಶೂ ಎಸೆದ ಪ್ರಕರಣ: ಎಲ್ಲೆಡೆ ಆಕ್ರೋಶ
* ‘ಜೀವನ ಸವೆಸಿ ಸಿಜೆಐನಂಥ ಸಾಂವಿಧಾನಿಕವಾದ ದೊಡ್ಡ ಹುದ್ದೆಯನ್ನೇರಿದ ಬಳಿಕವೂ ದಲಿತನೊಬ್ಬನನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ’ ಎಂದು ಬಿಹಾರದ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕುಮಾರ್ ರಾಮ್ ಅಭಿಪ್ರಾಯಪಟ್ಟರು. ಘಟನೆ ನೆನಪಿಸಿಕೊಂಡು ಕಣ್ಣೀರು ಹಾಕಿದರು
* ಮುಂಬೈನಲ್ಲಿ ಎನ್‌ಜಿಪಿ (ಶರದ್ ಪವಾರ್ ಬಣ) ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಪ್ರತಿಭಟನೆ
* ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಘಟನೆಯನ್ನು ಖಂಡಿಸಿದ್ದಾರೆ. ತಮಿಳುನಾಡಿನ ಎಐಎಡಿಎಂಕೆ ಪಕ್ಷ ಕೂಡ ಘಟನೆಯನ್ನು ಖಂಡಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.