ನವದೆಹಲಿ: ವಿವಿಧ ರಾಜ್ಯಗಳು ರೂಪಿಸಿರುವ ಮತಾಂತರ ವಿರೋಧಿ ಕಾಯ್ದೆಗಳಿಗೆ ತಡೆ ನೀಡುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಿರುವ ಸುಪ್ರೀಂ ಕೋರ್ಟ್ ನಡೆಯನ್ನು ಸಾಧು–ಸಂತರ ಸಂಘಟನೆಗಳು ಗುರುವಾರ ಪ್ರಶ್ನಿಸಿವೆ.
‘ಇಂತಹ ಕಾಯ್ದೆಗಳನ್ನು ರೂಪಿಸಿರುವುದು ರಾಜ್ಯ ಸರ್ಕಾರಗಳು. ಹೀಗಾಗಿ, ಈ ಕಾಯ್ದೆಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗುವ ಮೇಲ್ಮನವಿಗಳ ವಿಚಾರಣೆಯನ್ನು ಮೊದಲು ಆಯಾ ಹೈಕೋರ್ಟ್‌ಗಳು ನಡೆಸುವುದಕ್ಕೆ ಅವಕಾಶ ನೀಡಬೇಕು’ ಎಂದು ಸಂಘಟನೆಗಳು ಪ್ರತಿಪಾದಿಸಿವೆ.
ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ, ಅಖಿಲ ಭಾರತ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರನಾಥ ಸರಸ್ವತಿ ಮಹಾರಾಜ್,‘ಚುನಾಯಿತ ಜನಪ್ರತಿನಿಧಿಗಳು ಕಾಯ್ದೆಗಳನ್ನು ರೂಪಿಸಬೇಕೇ ಅಥವಾ ನ್ಯಾಯಾಧೀಶರೇ ಎಂಬ ಬಗ್ಗೆ ದೇಶದಾದ್ಯಂತ ಸಾರ್ವಜನಿಕ ಚರ್ಚೆ ಆರಂಭಿಸಲಾಗುವುದು’ ಎಂದು ಘೋಷಿಸಿದರು.
‘ಈ ವಿಚಾರವನ್ನು ಜನರ ಬಳಿಗೆ ಒಯ್ಯಲು ಸಂತರು ನಿರ್ಧರಿಸಿದ್ದಾರೆ. ವ್ಯಾಪಕ ಚರ್ಚೆ ಬಳಿಕ, ಈ ಕುರಿತು ಜನರು ಮತ್ತು ಸಾಂವಿಧಾನಿಕ ವ್ಯವಸ್ಥೆ ಒಳಗೇ ತೀರ್ಮಾನಿಸಬೇಕು’ ಎಂದರು.
‘ಕಾನೂನುಬಾಹಿರವಾಗಿ ಮತಾಂತರ ಮಾಡುವುದು ಸಾಮಾನ್ಯ ವಿಚಾರವಲ್ಲ. ಇದು ಜನಸಂಖ್ಯೆಯಲ್ಲಿ ಬದಲಾವಣೆ ತರುವ ಹಾಗೂ ದೇಶದ ಏಕತೆಗೆ ಸಂಬಂಧಿಸಿದ ವಿಚಾರ’ ಎಂದೂ ಹೇಳಿದರು.
‘ಸರ್ಕಾರದ ನಿಯಂತ್ರಣದಿಂದ ದೇವಸ್ಥಾನಗಳನ್ನು ಬಿಡುಗಡೆ ಮಾಡುವಂತೆ ಕೋರಿ ಸ್ವಾಮಿ ದಯಾನಂದ ಸರಸ್ವತಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಇದು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿ ವಿಚಾರ ಹೇಳಿತ್ತು. ಹೀಗಾಗಿ, ಇಂತಹ ಎಲ್ಲ ವಿಚಾರಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಬಾರದು’ ಎಂದೂ ಅವರು ಪ್ರತಿಪಾದಿಸಿದರು.
ನಿರ್ಮೋಹಿ ಅನಿ ಅಖಾಡ ಅಧ್ಯಕ್ಷ ಮಹಂತ ರಾಜೇಂದ್ರ ದಾಸ ಮಹಾರಾಜ್, ವಿಶ್ವ ಹಿಂದೂ ಪರಿಷತ್ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.