ನವದೆಹಲಿ: ದೇಶದಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ 8.82 ಲಕ್ಷಕ್ಕೂ ಹೆಚ್ಚು ಡಿಕ್ರಿ ಅಮಲ್ಜಾರಿ ಪ್ರಕರಣಗಳ ಅರ್ಜಿಗಳು ಬಾಕಿ ಇರುವುದು ಅತ್ಯಂತ ನಿರಾಶಾದಾಯಕ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಬೇಸರ ವ್ಯಕ್ತಪಡಿಸಿದೆ.
ಸಿವಿಲ್ ವಿವಾದಗಳಲ್ಲಿ ನ್ಯಾಯಾಲಯಗಳು ಹೊರಡಿಸಿದ ಆದೇಶಗಳನ್ನು ಜಾರಿಗೊಳಿಸುವಂತೆ ಕೋರಿ ಡಿಕ್ರಿ ಹೊಂದಿರುವವರು ಈ ಅರ್ಜಿಗಳನ್ನು ಸಲ್ಲಿಸಿರುತ್ತಾರೆ.
‘ಎಲ್ಲ ಹೈಕೋರ್ಟ್‌ಗಳು ಮುಂದಿನ ಆರು ತಿಂಗಳೊಳಗೆ ಈ ಅರ್ಜಿಗಳ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ತನ್ನ ವ್ಯಾಪ್ತಿಯ ಸಿವಿಲ್ ನ್ಯಾಯಾಲಯಗಳಿಗೆ ಸೂಚಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಪಂಕಜ್ ಮಿಥಲ್ ಅವರ ಪೀಠ ಮಾರ್ಚ್ 6ರಂದು ನಿರ್ದೇಶನ ನೀಡಿತ್ತು.
‘ಈ ವಿಷಯದಲ್ಲಿ ಯಾವುದೇ ವಿಳಂಬ ಆಗಬಾರದು. ಒಂದು ವೇಳೆ ವಿಳಂಬ ಆದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರಾಗುತ್ತಾರೆ’ ಎಂದು ಪೀಠ ಸ್ಪಷ್ಟಪಡಿಸಿತ್ತು.
3.85 ಲಕ್ಷ ಅರ್ಜಿಗಳ ವಿಲೇವಾರಿ:
‘ಮಾರ್ಚ್ 6ರಿಂದ ಆರು ತಿಂಗಳಲ್ಲಿ ಈ ರೀತಿಯ ಒಟ್ಟು 3,38,685 ಅರ್ಜಿಗಳನ್ನು ತೀರ್ಮಾನಿಸಿ ವಿಲೇವಾರಿ ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ. ಆದರೆ ಇನ್ನೂ 8,82,578 ಅರ್ಜಿಗಳು ಬಾಕಿಯಿವೆ’ ಎಂದು ಪೀಠ ಹೇಳಿದೆ.
‘ಆದೇಶ ನೀಡಿದ ನಂತರ ಅದನ್ನು ಜಾರಿಗೊಳಿಸಲು ಹಲವು ವರ್ಷಗಳೇ ಬೇಕು ಎನ್ನುವುದು ಅರ್ಥಹೀನ ಮತ್ತು ನ್ಯಾಯದ ಅಣಕವಲ್ಲವೇ’ ಎಂದು ಪೀಠವು ಅಕ್ಟೊಬರ್ 16ರ ನಿರ್ದೇಶನದಲ್ಲಿ ಉಲ್ಲೇಖಿಸಿದೆ.
ಬಾಕಿ ಇರುವ ಡಿಕ್ರಿ ಅಮಲ್ಜಾರಿ ಅರ್ಜಿಗಳ ಪರಿಣಾಮಕಾರಿ ಮತ್ತು ತ್ವರಿತ ವಿಲೇವಾರಿಗೆ ಹೈಕೋರ್ಟ್‌ಗಳು ಜಿಲ್ಲಾ ನ್ಯಾಯಾಲಯಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಪೀಠ ಮತ್ತೊಮ್ಮೆ ಸೂಚನೆ ನೀಡಿದೆ.
ಕರ್ನಾಟಕದಿಂದ ವಿವರಣೆ ಕೇಳಿದ ಪೀಠ
ಸುಪ್ರೀಂ ಕೋರ್ಟ್ ಕೇಳಿದ್ದ ಅಗತ್ಯ ದತ್ತಾಂಶಗಳನ್ನು ಕರ್ನಾಟಕ ಹೈಕೋರ್ಟ್ ಒದಗಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಪೀಠ ಇದೇ ವೇಳೆ ಗಮನಿಸಿತು. ‘ಆರು ತಿಂಗಳಲ್ಲಿ ವಿಲೇವಾರಿ ಮಾಡಿರುವ ಮತ್ತು ಬಾಕಿ ಇರುವ ಡಿಕ್ರಿ ಅಮಲ್ಜಾರಿ ಅರ್ಜಿಗಳ ಬಗ್ಗೆ ಮಾಹಿತಿ ಒದಗಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ಇನ್ನೊಮ್ಮೆ ಜ್ಞಾಪನೆ ಕಳುಹಿಸುವಂತೆ ಪೀಠ ಸೂಚನೆ ನೀಡಿತು. ಅಲ್ಲದೆ ನಿಗದಿತ ಅವಧಿಯಲ್ಲಿ ಏಕೆ ಮಾಹಿತಿ ನೀಡಿಲ್ಲ ಎಂಬುದರ ಕುರಿತು ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಎರಡು ವಾರಗಳಲ್ಲಿ ವಿವರಣೆ ನೀಡಬೇಕು’ ಎಂದೂ ಪೀಠ ತಿಳಿಸಿತು. ಪ್ರಕರಣದ ವಿಚಾರಣೆಯನ್ನು 2026ರ ಏಪ್ರಿಲ್ 10ಕ್ಕೆ ಮುಂದೂಡಿದ ಪೀಠವು ‘ಮುಂದಿನ ವಿಚಾರಣೆ ವೇಳೆಗೆ ಎಲ್ಲ ಹೈಕೋರ್ಟ್‌ಗಳು ಈ ಕುರಿತ ಅರ್ಜಿಗಳ ಸ್ಥಿತಿಗತಿಗೆ ಸಂಬಂಧಿಸಿದ ಪೂರ್ಣ ದತ್ತಾಂಶ ಒದಗಿಸಬೇಕು’ ಎಂದು ನಿರ್ದೇಶಿಸಿತು. ತಮಿಳುನಾಡಿನಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಉಂಟಾಗಿದ್ದ ಜಮೀನಿನ ಕುರಿತ ಸಿವಿಲ್ ವಿವಾದದ ವಿಚಾರಣೆ ವೇಳೆ ಪೀಠವು ದೇಶದಾದ್ಯಂತ ಬಾಕಿ ಇರುವ ಡಿಕ್ರಿ ಅಮಲ್ಜಾರಿ ಅರ್ಜಿಗಳ ಬಗ್ಗೆ ಮಾಹಿತಿ ಕೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.