ADVERTISEMENT

ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ: ಸುಪ್ರೀಂ ಕೋರ್ಟ್ ನಿರ್ದೇಶನ

ಅವಧಿ ಮುಗಿದ ನಂತರ ಖಾಲಿ ಬಿಡುವಂತಿಲ್ಲ: ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 10 ಮೇ 2022, 20:41 IST
Last Updated 10 ಮೇ 2022, 20:41 IST
   

ನವದೆಹಲಿ(ಪಿಟಿಐ): ‘ಮೂರು ಹಂತದ ಪರಿಶೀಲನೆ ಇಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳ ಅಧಿಕಾರ ಅವಧಿ ಪೂರ್ಣಗೊಂಡ ನಂತರ ನಿರ್ವಾತ ಸೃಷ್ಟಿಯಾಗಲು ಬಿಡದೇ ಚುನಾವಣೆ ನಡೆಸುವುದು ರಾಜ್ಯಗಳ ಸಾಂವಿಧಾನಿಕ ಹೊಣೆಗಾರಿಕೆಯಾಗಿದೆ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.

ಮಧ್ಯಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ, ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ಈ ವಿಷಯವನ್ನು ಸ್ಪಷ್ಟಪಡಿಸಿತು.ನ್ಯಾಯಮೂರ್ತಿಗಳಾದ ಅಭಯ್‌ ಎಸ್‌.ಓಕಾ ಹಾಗೂ ಸಿ.ಟಿ.ರವಿಕುಮಾರ್‌ ಈ ಪೀಠದಲ್ಲಿದ್ದಾರೆ.

ರಾಜ್ಯದ 23,263 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಂಬಂಧ ಎರಡು ವಾರಗಳ ಒಳಗಾಗಿ ಅಧಿಸೂಚನೆ ಹೊರಡಿಸುವಂತೆ ಮಧ್ಯಪ್ರದೇಶ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಜುಲೈ 12ಕ್ಕೆ ಮುಂದೂಡಿತು.

ADVERTISEMENT

‘ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಕೆಲ ಅರ್ಜಿಗಳ ವಿಚಾರಣೆ ಬಾಕಿ ಇದೆ. ಕೆಲ ಅರ್ಜಿಗಳಿಗೆ ಸಂಬಂಧಿಸಿ ಮಧ್ಯಂತರ ಆದೇಶಗಳನ್ನು ಹೊರಡಿಸಲಾಗಿದ್ದು, ಇವು ಚುನಾವಣೆ ಅಧಿಸೂಚನೆ ಪ್ರಕಟಿಸಲು ಅಡ್ಡಿಯಾಗ
ಬಹುದು’ಎಂಬುದಾಗಿ ರಾಜ್ಯ ಚುನಾವಣಾ ಆಯೋಗದ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ವಿಷಯವಾಗಿ ಸುಪ್ರೀಂಕೋರ್ಟ್‌ ನೀಡುವ ಆದೇಶ ಮತ್ತು ನಿರ್ದೇಶನಗಳನ್ನು ರಾಜ್ಯ ಚುನಾವಣಾ ಆಯೋಗ ಪಾಲಿಸಬೇಕು. ಹೈಕೋರ್ಟ್‌ ಅಥವಾ ಸಿವಿಲ್‌ ನ್ಯಾಯಾಲಯ ನೀಡುವ ಆದೇಶಗಳಿಂದ ಪ್ರಭಾವಕ್ಕೆ ಒಳಗಾಗಬಾರದು’ ಎಂದು ಸೂಚಿಸಿತು.

ಕೋರ್ಟ್ ಹೇಳಿದ್ದೇನು?

l ಮೂರು ಹಂತದ ಪರಿಶೀಲನೆ, ಕ್ಷೇತ್ರಗಳ ಪುನರ್‌ವಿಂಗಡಣೆ ಎಂಬುದು ನಿರಂತರ ಹಾಗೂ ಸಂಕೀರ್ಣವಾದ ಪ್ರಕ್ರಿಯೆ.

l ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳಲ್ಲಿ ನೂತನ ಚುನಾಯಿತ ಮಂಡಳಿ ಇರಬೇಕಾದುದು ಅಗತ್ಯ.

l ಮೂರು ಹಂತದ ಪರಿಶೀಲನೆ ಪೂರ್ಣಗೊಳ್ಳುವವರೆಗೆ, ಹಿಂದುಳಿದ ವರ್ಗಗಳಿಗೆ ಮೀಸಲಾದ ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ನೀಡಿ ಅಧಿಸೂಚನೆ ಹೊರಡಿಸಬೇಕು.

‘ಮೀಸಲಾತಿ ಉದ್ದೇಶ, ಸ್ವರೂಪ ಬೇರೆಯಾಗಿವೆ’

‘ಸ್ಥಳೀಯ ಸಂಸ್ಥೆಗಳಲ್ಲಿ ನೀಡಲಾಗಿರುವ ಮೀಸಲಾತಿಯ ಸ್ವರೂಪ ಹಾಗೂ ಉದ್ದೇಶವೇ ಬೇರೆ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ನೀಡಿರುವ ಮೀಸಲಾತಿಯೇ ಬೇರೆ ಎಂಬುದನ್ನು ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಈಗಾಗಲೇ ವ್ಯಾಖ್ಯಾನಿಸಿದೆ.

‘ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿ ಮೂರು ಹಂತದ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ಭವಿಷ್ಯದಲ್ಲಿ ನಡೆಯುವ ಚುನಾವಣೆಗಳಿಗೆ ಮೀಸಲಾತಿಯನ್ನು ಪರಿಗಣಿಸಬಹುದು. ಆದರೆ, ಸಾಂವಿಧಾನಿಕ ಹೊಣೆಗಾರಿಕೆ ದೃಷ್ಟಿಯಿಂದ ನೋಡಿದಾಗ, ಚುನಾವಣೆಗಳು ನಡೆಯಲೇಬೇಕು ಹಾಗೂ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು’ ಎಂದು ನ್ಯಾಯಪೀಠ ಹೇಳಿತು.

ಪರಿಶೀಲನಾ ಅರ್ಜಿ ಸಲ್ಲಿಕೆ: ಶಿವರಾಜಸಿಂಗ್‌ ಚೌಹಾಣ್

ಭೋಪಾಲ್: ‘ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ ನಂತರವೇ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುವುದು’ ಎಂಬ ಬಗ್ಗೆ ಸುಪ್ರೀಂಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್ ಚೌಹಾಣ್ ಇಲ್ಲಿ ಹೇಳಿದರು.

ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಂಬಂಧ ಎರಡು ವಾರಗಳ ಒಳಗಾಗಿ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿರುವ ಕುರಿತು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.