
ಸುಪ್ರೀಂ ಕೋರ್ಟ್
ನವದೆಹಲಿ: ‘₹50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಆಸ್ತಿ ಅಥವಾ ಮನೆ ಖರೀದಿಸುವಾಗ ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್) ಬಾಧ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಯಾವುದೇ ವ್ಯವಸ್ಥೆ ಇಲ್ಲ’ ಎಂದು ಆರೋಪಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾಗೊಳಿಸಿದೆ.
’ಖರೀದಿದಾರರಿಗೆ ಆಸ್ತಿ ನೋಂದಣಿ ವೇಳೆ ತೆರಿಗೆ ವಂಚಿಸುವ ಉದ್ದೇಶ ಇಲ್ಲದಿದ್ದರೂ, ಟಿಡಿಎಸ್ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ಕಾರಣ, ನೋಂದಣಿ ನಂತರ ಅವರು ದಂಡ, ಬಡ್ಡಿ ಪಾವತಿಸಿ ಸುಸ್ತಿದಾರರಾಗಬೇಕಾಗುತ್ತದೆ. ಟಿಡಿಎಸ್ ಬಾಧ್ಯತೆ ಬಗ್ಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ತಿರಸ್ಕರಿಸಿತು.
’ಮೊದಲ ಬಾರಿಗೆ ಮನೆ ಖರೀದಿಸುತ್ತಿದ್ದು, ಟಿಡಿಎಸ್ ಬಗ್ಗೆ ಅರಿವಿಲ್ಲ. ಈಗಿರುವ ಕಾನೂನು ಚೌಕಟ್ಟಿನಡಿ, ಸಂಪೂರ್ಣ ಟಿಡಿಎಸ್ ಬಾಧ್ಯತೆಯನ್ನು ಖರೀದಿದಾರನ ಮೇಲೆಯೇ ಹೇರಲಾಗುತ್ತದೆ. ನೋಂದಣಿ ಕಚೇರಿಯಲ್ಲೂ ’ಟಿಡಿಎಸ್’ ಪರಿಶೀಲಿಸುವ ಕಾರ್ಯವಿಧಾನ ಇಲ್ಲ.ಹೀಗಾಗಿ ಅನೇಕ ಖರೀದಿದಾರರು ಟಿಡಿಎಸ್ ಪರಿಶೀಲಿಸದೆ ಆಸ್ತಿ ನೋಂದಣಿ ಪೂರ್ಣಗೊಳಿಸುತ್ತಾರೆ’ ಎಂದು ಅರ್ಜಿದಾರರು ನ್ಯಾಯಪೀಠದ ಗಮನಕ್ಕೆ ತಂದರು.
‘ತೆರಿಗೆ ಬಾಧ್ಯತೆ ಅಥವಾ ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳ ಸಿಂಧುತ್ವ ಪ್ರಶ್ನಿಸುತ್ತಿಲ್ಲ, ಆಸ್ತಿ ನೋಂದಣಿ ವೇಳೆ ‘ಟಿಡಿಎಸ್‘ ಬಗ್ಗೆ ಅರಿವು ಮೂಡಿಸುವ ಆಡಳಿತಾತ್ಮಕ ಕಾರ್ಯವಿಧಾನದ ಅಗತ್ಯವಿದೆ’ ಎಂದು ಅರ್ಜಿದಾರರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.