
ಸುಪ್ರೀಂ ಕೋರ್ಟ್
ನವದೆಹಲಿ: ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಪವನ ದಿಬ್ಬೂರು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಐಪಿಸಿಯ ಸೆಕ್ಷನ್ 120ಬಿ ಅಡಿ ಶಿಕ್ಷಾರ್ಹವಾಗುವ ಕ್ರಿಮಿನಲ್ ಪಿತೂರಿಯಂತಹ ಅಪರಾಧ ಕೃತ್ಯವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅನುಸೂಚಿಯಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಿದ ಅಪರಾಧಕ್ಕೆ ಸಂಬಂಧ ಪಟ್ಟಿದ್ದರೆ ಮಾತ್ರ ಅದು ಅನುಸೂಚಿತ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ 2023ರ ನವೆಂಬರ್‌ನಲ್ಲಿ ತೀರ್ಪು ನೀಡಿತ್ತು.
ಪವನ ದಿಬ್ಬೂರು ಅವರು ಬೆಂಗಳೂರಿನಲ್ಲಿ ಅಲಯನ್ಸ್ ಬ್ಯುಸಿನೆಸ್ ಸ್ಕೂಲ್‌ನ ಆಸ್ತಿಯನ್ನು ₹13.05 ಕೋಟಿಗೆ ಹಾಗೂ ಮಧುಕರ್ ಅಂಗೂರ್ ಅವರ ಆಸ್ತಿಯನ್ನು ₹2.47 ಕೋಟಿಗೆ ಖರೀದಿಸಲು ಕ್ರಿಮಿನಲ್ ಸಂಚು ರೂಪಿಸಿದ್ದರು. ಇದರ ಆಧಾರದ ಮೇಲೆ ಪವನ ವಿರುದ್ಧ ಹಣದ ಅಕ್ರಮ ವರ್ಗಾವಣೆ ಕಾಯ್ದೆಯಡಿ ಕ್ರಮಕೈಗೊಳ್ಳುವುದಕ್ಕೆ ಜಾರಿ ನಿರ್ದೇಶನಾಲಯ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಪವನ ದಿಬ್ಬೂರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಇ.ಡಿ. ಅರ್ಜಿ ಸಲ್ಲಿಸಿತ್ತು.
ಪವನ ದಿಬ್ಬೂರು ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.