ಸುಪ್ರೀಂ ಕೋರ್ಟ್, ನ್ಯಾ. ಯಶವಂತ ವರ್ಮಾ
ನವದೆಹಲಿ: ಮನೆಯಲ್ಲಿ ನಗದು ಪತ್ತೆ ಪ್ರಕರಣದಲ್ಲಿ ತನ್ನನ್ನು ದೋಷಿ ಎಂದು ಹೇಳಿರುವ ಆಂತರಿಕ ತನಿಖಾ ಸಮಿತಿ ನೀಡಿದ ವರದಿಯನ್ನು ಅಮಾನ್ಯ ಮಾಡಬೇಕು ಎಂದು ಕೋರಿ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ ವರ್ಮಾ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಅಲ್ಲದೆ ತಮ್ಮನ್ನು ವಾಗ್ದಂಡನೆ ಗುರಿಪಡಿಸಬೇಕು ಎಂದು ಮೇ 8 ರಂದು ಸಿಜೆಐ ಅವರು ಸಂಸತ್ತಿಗೆ ಶಿಫಾರಸು ಮಾಡಿದ್ದನ್ನು ರದ್ದು ಮಾಡಬೇಕೆಂದೂ ಅವರು ಮನವಿ ಮಾಡಿದ್ದಾರೆ.
ಪ್ರಕರಣವನ್ನು ತ್ವರಿತ ವಿಚಾರಣೆ ನಡೆಸಬೇಕು ಎಂದು ಸಿಜೆಐ ಬಿ.ಆರ್. ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಹಾಗೂ ಜಾಯ್‌ಮಲ್ಯ ಬಾಗ್ಚಿ ಅವರಿದ್ದ ಪೀಠದ ಮುಂದೆ ಬಂದಿತ್ತು.
ವರ್ಮಾ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ‘ವಾಗ್ದಂಡನೆಗೆ ಗುರಿಯಾಗಿಸಬೇಕು ಎನ್ನುವ ಶಿಫಾರಸ್ಸಿನ ಬಗ್ಗೆ ನಾವು ಕೆಲವೊಂದು ಸಂವಿಧಾನಿಕ ವಿಷಯಗಳನ್ನು ಎತ್ತಿದ್ದೇವೆ. ಹೀಗಾಗಿ ಇದನ್ನು ಶೀಘ್ರವೇ ವಿಚಾರಣೆಗೆ ಪಟ್ಟಿ ಮಾಡಬೇಕು’ ಎಂದು ಭಿನ್ನವಿಸಿಕೊಂಡರು.
‘ಇದಕ್ಕೆ ನಾವು ಹೊಸದೊಂದು ಪೀಠ ರಚನೆ ಮಾಡಬೇಕಿದೆ’ ಎಂದು ಸಿಜೆಐ ಹೇಳಿದರು.
ನಾನೂ ಆ ಪ್ರಕ್ರಿಯೆ ಭಾಗವಾಗಿದ್ದರಿಂದ ನಾನು ಇದನ್ನು ತೆಗೆದುಕೊಳ್ಳುವುದು ಸರಿಯಾಗುವುದಿಲ್ಲ. ಈ ಬಗ್ಗೆ ನಿರ್ಧರಿಸಿ, ಪೀಠ ರಚನೆ ಮಾಡುತ್ತೇವೆ ಎಂದು ಸಿಜೆಐ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.