ADVERTISEMENT

ಕೊಲೆ ಪ್ರಕರಣ: ಪಂಜಾಬ್‌ ಮಾಜಿ ಡಿಜಿಪಿ ಬಂಧನಕ್ಕೆ ‘ಸುಪ್ರೀಂ’ ತಡೆ

ಪಿಟಿಐ
Published 15 ಸೆಪ್ಟೆಂಬರ್ 2020, 9:26 IST
Last Updated 15 ಸೆಪ್ಟೆಂಬರ್ 2020, 9:26 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಪಂಜಾಬ್‌ನ ಮಾಜಿ ಡಿಜಿಪಿ ಸುಮೇಧ್‌ ಸಿಂಗ್‌ ಸೈನಿ ಬಂಧನಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ತಾತ್ಕಾಲಿಕ ತಡೆ ನೀಡಿದೆ.

ಸುಮೇಧ್‌ ಅವರು 1991ರಲ್ಲಿ ನಡೆದಿದ್ದ ಜೂನಿಯರ್‌ ಎಂಜಿನಿಯರ್ ಬಲವಂತ್‌ ಸಿಂಗ್‌ ಮುಲ್ತಾನಿ‌ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೈನಿಗೆ ನಿರೀಕ್ಷಣಾ ಜಾಮೀನು ನೀಡಲು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌‌ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸೈನಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ADVERTISEMENT

ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಆರ್‌.ಎಸ್‌.ರೆಡ್ಡಿ ಹಾಗೂ ಎಂ.ಆರ್‌.ಶಾ ಅವರಿದ್ದ ತ್ರಿಸದಸ್ಯ ಪೀಠವು ಮಂಗಳವಾರ ಇದರ ವಿಚಾರಣೆ ನಡೆಸಿತು.

‘ಪ್ರಕರಣ ನಡೆದು 29 ವರ್ಷಗಳು ಉರುಳಿವೆ. ಸೈನಿ ಬಂಧನಕ್ಕೆ ಈಗ ಇಷ್ಟೊಂದು ಆತುರ ತೋರುತ್ತಿರುವುದಾದರೂ ಏಕೆ’ ಎಂದು ಪೀಠವು ಪಂಜಾಬ್‌ ಸರ್ಕಾರದ ಪರ ಹಿರಿಯ ವಕೀಲ ಸಿದ್ಧಾರ್ಥ್‌ ಲೂತ್ರಾ ಅವರನ್ನು ಪ್ರಶ್ನಿಸಿತು.

‘ಝೆಡ್‌ ಪ್ಲಸ್‌ ಶ್ರೇಣಿಯ ಭದ್ರತೆ ಹೊಂದಿದ್ದ ಮಾಜಿ ಡಿಜಿಪಿ, ಈಗ ತಲೆಮರೆಸಿಕೊಂಡಿದ್ದಾರೆ’ ಎಂದು ಲೂತ್ರಾ ಅವರು ಪೀಠಕ್ಕೆ ತಿಳಿಸಿದರು.

ತನಿಖೆಗೆ ಸಹಕರಿಸುವಂತೆ ಸೈನಿಗೆ ಸೂಚಿಸಿದ ಪೀಠವು ನಾಲ್ಕು ವಾರಗಳ ನಂತರ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿತು. ಮುಂದಿನ ಆದೇಶದವರೆಗೂ ಸೈನಿ ಅವರನ್ನು ಬಂಧಿಸದಂತೆ ನಿರ್ದೇಶಿಸಿತು.

ಸೆಪ್ಟೆಂಬರ್‌ 8ರಂದು ಹೈಕೋರ್ಟ್,‌ ಸೈನಿ ಅವರ ಎರಡು ಅರ್ಜಿಗಳನ್ನು ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.