ADVERTISEMENT

ನಿಮ್ಮ ರಾಜ್ಯದಲ್ಲೇ ದ್ವೇಷ ಭಾಷಣದ ದೂರು ಇತ್ಯರ್ಥಪಡಿಸಿಕೊಳ್ಳಿ: ಸುಪ್ರೀಂ ಕೋರ್ಟ್

ಪಿಟಿಐ
Published 25 ನವೆಂಬರ್ 2025, 14:22 IST
Last Updated 25 ನವೆಂಬರ್ 2025, 14:22 IST
   

ನವದೆಹಲಿ: ‘ದ್ವೇಷ ಭಾಷಣದ ಎಲ್ಲ ಪ್ರಕರಣಗಳ ಮೇಲುಸ್ತುವಾರಿ ವಹಿಸಲು, ಅದಕ್ಕೆ ಕಾನೂನು ರೂಪಿಸಲು ಬಯಸುವುದಿಲ್ಲ. ಅದಕ್ಕಾಗಿ ಪೊಲೀಸ್‌ ಠಾಣೆಗಳು, ಅಧೀನ ನ್ಯಾಯಾಲಯಗಳು, ಹೈಕೋರ್ಟ್‌ಗಳು ಇವೆ’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ. 

ವ್ಯಕ್ತಿಯೊಬ್ಬರು ತಮ್ಮ ಭಾಷಣದಲ್ಲಿ ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್‌ ಮತ್ತು ಸಂದೀಪ್‌ ಮೆಹ್ತಾ ಅವರನ್ನೊಳಗೊಂಡ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

‘ಈ ದೇಶದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳ ಮೇಲೆ ನಿಗಾ ವಹಿಸಲು, ಕಾನೂನು ರೂಪಿಸಲು ಸುಪ್ರೀಂ ಕೋರ್ಟ್ ಬಯಸುವುದಿಲ್ಲ. ಅದಕ್ಕಾಗಿ ಅಧಿಕಾರಿಗಳು ಇದ್ದಾರೆ, ಕಾನೂನು ವ್ಯವಸ್ಥೆ ಇದೆ. ಅವರು ನೋಡಿಕೊಳ್ಳುತ್ತಾರೆ. ನೀವು ನಿಮ್ಮ ರಾಜ್ಯದಲ್ಲೇ ದ್ವೇಷ ಭಾಷಣದ ದೂರುಗಳನ್ನು ಇತ್ಯರ್ಥಪಡಿಸಿಕೊಳ್ಳಿ. ಅಲ್ಲಿನ ಹೈಕೋರ್ಟ್‌ ಸಂಪರ್ಕಿಸಿ’ ಎಂದು ನ್ಯಾಯಪೀಠ ಅರ್ಜಿದಾರರಿಗೆ ಸೂಚಿಸಿತು.  

ADVERTISEMENT

ಮುಖಂಡರು ಮಾತ್ರವಲ್ಲ, ಕೆಲವು ಜನಪ್ರತಿನಿಧಿಗಳು ಸಹ ತಮ್ಮ ಭಾಷಣದಲ್ಲಿ ಸಮುದಾಯದ ವಿರುದ್ಧ ‘ಆರ್ಥಿಕ ಬಹಿಷ್ಕಾರ’ಕ್ಕೆ ಕರೆ ನೀಡುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನ ನಿರ್ದೇಶನ ಬಯಸಿ ಅರ್ಜಿ ಸಲ್ಲಿಸಿರುವುದಾಗಿ, ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. 

‘ಎಲ್ಲ ಧರ್ಮಗಳಲ್ಲೂ ದ್ವೇಷ ಭಾಷಣದ ಪ್ರವೃತ್ತಿ ಗಣನೀಯವಾಗಿ ಹೆಚ್ಚಿದೆ. ಹಾಗಾಗಿ, ಈ ವಿಚಾರದಲ್ಲಿ ‘ಸಾರ್ವಜನಿಕ ಹಿತಾಸಕ್ತಿ ಎಂಬುದು ಒಂದು ನಿರ್ದಿಷ್ಟ ಧರ್ಮಕ್ಕೆ ಮಾತ್ರ ಸೀಮಿತವಾಗಿರಬಾರದು’ ಎಂದು ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪೀಠಕ್ಕೆ ತಿಳಿಸಿದರು.

‘ಇಂತಹ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಇದ್ದರೆ ಅದನ್ನು ಹೈಕೋರ್ಟ್‌ ಗಮನಿಸಲಿದೆ’ ಎಂದು ನ್ಯಾಯಪೀಠ ಹೇಳಿತು.

ಇತ್ತೀಚಿನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 1989ರಲ್ಲಿ ನಡೆದ ಬಾಗಲ್ಪುರ ಗಲಭೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ, ‘ಬಿಹಾರವು ಹೂಕೋಸು ಕೃಷಿಗೆ ಅನುಮೋದನೆ ನೀಡಿದೆ’ ಎಂದು ಅಸ್ಸಾಂ ಸಚಿವ ಅಶೋಕ್‌ ಸಿಂಘಾಲ್‌ ಮಾಡಿದ್ದ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಇನ್ನೊಂದು ಅರ್ಜಿ ಸಲ್ಲಿಕೆಯಾಗಿರುವ ಬಗ್ಗೆ ವಕೀಲರು ಪೀಠದ ಗಮನಕ್ಕೆ ತಂದರು. 

ವಾದ ಆಲಿಸಿದ ಪೀಠವು ದ್ವೇಷ ಭಾಷಣ ಪ್ರಕರಣಗಳ ಮುಂದಿನ ವಿಚಾರಣೆಯನ್ನು ಡಿ.9ಕ್ಕೆ ನಿಗದಿಪಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.