ADVERTISEMENT

ಮಸೂದೆಗಳಿಗೆ ಅಂಕಿತ ಹಾಕಲು ಗಡುವು: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ಪಿಟಿಐ
Published 11 ಸೆಪ್ಟೆಂಬರ್ 2025, 10:06 IST
Last Updated 11 ಸೆಪ್ಟೆಂಬರ್ 2025, 10:06 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ:  ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಹಾಗೂ ರಾಷ್ಟ್ರಪತಿ ಅವರು ಅಂಕಿತ ಹಾಕುವುದಕ್ಕೆ ಕಾಲಮಿತಿ ವಿಧಿಸಬಹುದೇ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಳಿರುವ ಪ್ರಶ್ನೆಗಳ ಕುರಿತು 10 ದಿನಗಳವರೆಗೆ ವಾದ–ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್‌, ಗುರುವಾರ ತೀರ್ಪನ್ನು ಕಾಯ್ದಿರಿಸಿತು.

ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ, ನ್ಯಾಯಮೂರ್ತಿಗಳಾದ ಸುರ್ಯಕಾಂತ್, ವಿಕ್ರಮ್ ನಾಥ್‌, ಪಿ.ಎಸ್‌.ನರಸಿಂಹ ಮತ್ತು ಎ.ಎಸ್‌.ಚಂದೂರ್ಕರ್‌ ಅವರನ್ನು ಒಳಗೊಂಡ ಸಂವಿಧಾನ ಪೀಠ ಈ ಕುರಿತು ಆಗಸ್ಟ್‌ 19ರಿಂದ ವಿಚಾರಣೆ ಪ್ರಾರಂಭಿಸಿತ್ತು.

ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರ ವಾದದ ಮುಕ್ತಾಯದೊಂದಿಗೆ ಪೀಠವು ತೀರ್ಪನ್ನು ಕಾಯ್ದಿರಿಸಿತು. ಕೇಂದ್ರದ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರೂ ತಮ್ಮ ವಾದವನ್ನು ಮುಕ್ತಾಯಗೊಳಿಸಿದರು. 

ADVERTISEMENT

ರಾಷ್ಟ್ರಪತಿ ಅವರು ಎತ್ತಿದ್ದ ಪ್ರಶ್ನೆಗಳನ್ನು ಆಕ್ಷೇಪಿಸಿದ ವಿರೋಧ ಪಕ್ಷಗಳ ಆಡಳಿತವಿರುವ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಕರ್ನಾಟಕ, ತೆಲಂಗಾಣ, ಪಂಜಾಬ್‌ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳ ಪರ ವಕೀಲರು ವಿರೋಧಗಳನ್ನು ದಾಖಲಿಸುವ ಮೂಲಕ ತಮ್ಮ ವಾದ ಅಂತಿಮಗೊಳಿಸಿದರು. 

ಮಸೂದೆಗಳಿಗೆ ಅಂಕಿತ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಪ್ರಶ್ನಿಸಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟ್‌ ಏಪ್ರಿಲ್‌ 8ರಂದು ತೀರ್ಪು ನೀಡಿತ್ತು. ಪರಿಶೀಲನೆಗಾಗಿ ರಾಜ್ಯ‍ಪಾಲರಿಂದ ಬಂದ ಮಸೂದೆಗಳ ವಿಚಾರವಾಗಿ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ರಾಷ್ಟ್ರಪತಿಯ ವರಿಗೆ ಕಾಲಮಿತಿ ನಿಗದಿ ಮಾಡಿತ್ತು.  ಇದರ ಬೆನ್ನಲ್ಲೇ, ರಾಷ್ಟ್ರಪತಿಯ
ವರು ಸುಪ್ರೀಂ ಕೋರ್ಟ್‌ಗೆ ಐದು ಪುಟಗಳ ಪತ್ರ ಬರೆದು, 14 ಪ್ರಶ್ನೆಗಳನ್ನು ಎತ್ತಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.