ನವದೆಹಲಿ: ರಾಜ್ಯಗಳ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕಲು ಕಾಲಮಿತಿ ನಿಗದಿಪಡಿಸಬಹುದೇ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಲ್ಲೇಖಿಸಿರುವ ಸಾಂವಿಧಾನಿಕ ಪ್ರಶ್ನೆಗಳ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 19ರಂದು ಪ್ರಾರಂಭಿಸಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಗಸ್ಟ್ 12ರೊಳಗೆ ಈ ವಿಷಯದ ಕುರಿತು ತಮ್ಮ ಪ್ರತಿಪಾದನೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ತಿಳಿಸಿದೆ.
ರಾಷ್ಟ್ರಪತಿಗಳ ಉಲ್ಲೇಖಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಆಕ್ಷೇಪಣೆಗಳನ್ನು ಸಲ್ಲಿಸಿರುವ ಕೇರಳ ಮತ್ತು ತಮಿಳುನಾಡು ರಾಜ್ಯಗಳ ವಾದವನ್ನು ಆಗಸ್ಟ್ 19ರಂದು ಮೊದಲ ಒಂದು ಗಂಟೆ ವಿಚಾರಣೆ ನಡೆಸುವುದಾಗಿ ಪೀಠ ತಿಳಿಸಿದೆ.
ರಾಷ್ಟ್ರಪತಿಯವರ ಉಲ್ಲೇಖವನ್ನು ಬೆಂಬಲಿಸುವ ಕೇಂದ್ರ ಮತ್ತು ರಾಜ್ಯಗಳ ಪರವಾಗಿ ಆಗಸ್ಟ್ 19, 20, 21 ಮತ್ತು 26ರಂದು ವಿಚಾರಣೆ ನಡೆಸಲಾಗುವುದು. ಈ ಉಲ್ಲೇಖವನ್ನು ವಿರೋಧಿಸುವವರ ವಿಚಾರಣೆಯನ್ನು ಆಗಸ್ಟ್ 28, ಸೆಪ್ಟೆಂಬರ್ 2, 3 ಮತ್ತು 9ರಂದು ನಡೆಸಲಾಗುವುದು ಎಂದು ಪೀಠ ಹೇಳಿದೆ. ಅಲ್ಲದೆ ಇತರೆ ಪ್ರತಿವಾದಿಗಳಿದ್ದರೆ ಸೆಪ್ಟೆಂಬರ್ 10ರಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ.
ತಮಿಳುನಾಡು ಸರ್ಕಾರ ಪ್ರಶ್ನಿಸಿದ್ದ ಮಸೂದೆಗಳಿಗೆ ಅಂಕಿತ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಏಪ್ರಿಲ್ 8ರಂದು ತೀರ್ಪು ನೀಡಿತ್ತು. ಪರಿಶೀಲನೆಗಾಗಿ ರಾಜ್ಯಪಾಲರಿಂದ ಬಂದ ಮಸೂದೆಗಳ ವಿಚಾರವಾಗಿ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ರಾಷ್ಟ್ರಪತಿಯವರಿಗೆ ಕಾಲಮಿತಿ ನಿಗದಿ ಮಾಡಿತ್ತು.
ಇದರ ಬೆನ್ನಲ್ಲೇ, ರಾಷ್ಟ್ರಪತಿಯವರು ಸುಪ್ರೀಂ ಕೋರ್ಟ್‌ಗೆ ಐದು ಪುಟಗಳ ಪತ್ರ ಬರೆದು, 14 ಪ್ರಶ್ನೆಗಳನ್ನು ಕೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.