ADVERTISEMENT

ಕೇರಳ ಪತ್ರಕರ್ತ ಬಂಧನ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 12:06 IST
Last Updated 16 ನವೆಂಬರ್ 2020, 12:06 IST
   

ನವದೆಹಲಿ: ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಸಾವಿನ ಪ್ರಕರಣದ ನಂತರ ಹಾಥರಸ್‌ ಪರಿಸ್ಥಿತಿ ಕುರಿತು ವರದಿ ಮಾಡುವುದಕ್ಕಾಗಿ ತೆರಳುತ್ತಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕಿ ಕಪ್ಪನ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಅಕ್ಟೋಬರ್‌ನಲ್ಲಿ ಬಂಧಿಸಿದ್ದರು. ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದ್ದು, ಪ್ರಕರಣದ ಸಂಬಂಧ ಉತ್ತರ ಪ್ರದೇಶ ಸರ್ಕಾರ ಪ್ರತಿಕ್ರಿಯೆ ನೀಡುವಂತೆ ಸೋಮವಾರ ಕೋರ್ಟ್‌ ಕೇಳಿದೆ.

ಅಲಹಾಬಾದ್‌ ಹೈಕೋರ್ಟ್‌ಗೆ ಮನವಿ ಸಲ್ಲಿಸದೆಯೇ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಬಂದಿರುವ ಬಗ್ಗೆ ಕೇರಳ ಕಾರ್ಯನಿರತ ಪತ್ರಕರ್ತರ ಸಂಘವನ್ನು (ಕೆಯುಡಬ್ಲ್ಯುಜೆ) ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್‌ ಅವರನ್ನು ಒಳಗೊಂಡ ನ್ಯಾಯಪೀಠವು ಪ್ರಶ್ನಿಸಿದೆ.

ಅಕ್ಟೋಬರ್‌ 5ರಿಂದ ಬಂಧನದಲ್ಲಿರುವ ಪತ್ರಕರ್ತ ಸಿದ್ದಿಕಿ ಕಪ್ಪನ್‌ ಅವರಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಹಿರಿಯ ವಕೀಲ ಕಪಿಲ್‌ ಸಿಬಲ್‌ ಕೋರ್ಟ್‌ಗೆ ಮನವಿ ಮಾಡಿದರು. 'ಕಕ್ಷಿದಾರರ ವಿರುದ್ಧ ಯಾವುದೇ ಆರೋಪಗಳಿಲ್ಲ. ಎಫ್‌ಐಆರ್‌ನಲ್ಲಿಯೂ ಅವರನ್ನು ಹೆಸರಿಸಿಲ್ಲ. ಅವರನ್ನು ಅಕ್ಟೋಬರ್‌ 5ರಿಂದ ಬಂಧನದಲ್ಲಿಡಲಾಗಿದೆ' ಎಂದು ತಿಳಿಸಿದರು.

ADVERTISEMENT

ನೋಟಿಸ್‌ ಜಾರಿ ಮಾಡುವುದಾಗಿ ಹೇಳಿರುವ ಕೋರ್ಟ್‌, ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದೆ. 'ಹೈಕೋರ್ಟ್‌ಗೆ ಏಕೆ ಮನವಿ ಸಲ್ಲಿಸಿಲ್ಲ' ಎಂದು ಪ್ರಶ್ನಿಸಿದೆ. ನಾಲ್ಕು ವಾರಗಳ ಬಳಿಕ ವಿಚಾರಣೆ ನಡೆಸುವುದಾಗಿ ಈ ಹಿಂದೆ ಹೇಳಿದ್ದ ಸುಪ್ರೀಂ ಕೋರ್ಟ್‌, ಆ ಅವಧಿಯಲ್ಲಿ ಪತ್ರಕರ್ತರ ಸಂಘ ಅಲಹಾಬಾದ್‌ ಹೈಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು.

ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆಂಬ ಶಂಕೆಯ ಮೇಲೆ ಪತ್ರಕರ್ತ ಸಿದ್ದಿಕಿ ಕಪ್ಪನ್ ಅವರನ್ನು 'ಕಾನೂನು ಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆಯಡಿ(ಯುಎಪಿಎ)' ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಅವರು azhimukham.com ಸೇರಿದಂತೆ ದೆಹಲಿ ಘಟಕದ ಹಲವು ಮಲಯಾಳಂ ಪತ್ರಿಕೆಗಳಿಗೆ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.