
ನವದೆಹಲಿ: ರಾಜಕೀಯ ಪಕ್ಷಗಳು ‘ಅನಾಮಧೇಯ’ ಮೂಲಗಳಿಂದ ₹2,000ಕ್ಕಿಂತ ಕಡಿಮೆ ನಗದು ದೇಣಿಗೆ ಸ್ವೀಕರಿಸಲು ಅನುಮತಿಸುವ ಆದಾಯ ತೆರಿಗೆ ಕಾಯ್ದೆಯ ನಿಬಂಧನೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಮತ್ತು ಇತರರ ಪ್ರತಿಕ್ರಿಯೆ ಕೋರಿದೆ.
‘ದೇಣಿಗೆಯ ಮೂಲವನ್ನು ಬಹಿರಂಗಪಡಿಸದೇ ಇರುವುದರಿಂದ ಮತದಾರರಿಗೆ ರಾಜಕೀಯ ಪಕ್ಷಗಳ ಬಳಿಯಿರುವ ನಿಧಿಯ ಮೂಲದ ಬಗ್ಗೆ ಮಾಹಿತಿ ದೊರೆಯುವುದಿಲ್ಲ. ಈ ಪಾರದರ್ಶಕತೆಯ ಕೊರತೆಯು ಚುನಾವಣಾ ಪ್ರಕ್ರಿಯೆಯ ಪರಿಶುದ್ಧತೆಯನ್ನು ಹಾಳು ಮಾಡುತ್ತದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ನ್ಯಾಯಮೂರ್ತಿಗಳಾದ ವಿಕ್ರಮ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, ಅರ್ಜಿಯನ್ನು ನಾಲ್ಕು ವಾರಗಳ ಬಳಿಕ ವಿಚಾರಣೆಗೆ ಪಟ್ಟಿ ಮಾಡುವುದಾಗಿ ಸೋಮವಾರ ತಿಳಿಸಿತು.
‘ನೀವು ಆರಂಭದಲ್ಲಿ ಹೈಕೋರ್ಟ್‌ಗೆ ಏಕೆ ಅರ್ಜಿ ಸಲ್ಲಿಸಲಿಲ್ಲ’ ಎಂದು ಅರ್ಜಿದಾರರಾದ ಖೇಮ್ ಸಿಂಗ್ ಭಾಟಿ ಮತ್ತು ಸ್ನೇಹಾ ಕಲಿತಾ ಅವರ ಪರ ಹಾಜರಾದ ಹಿರಿಯ ವಕೀಲ ವಿಜಯ್ ಹಂಸಾರಿಯಾ ಅವರಲ್ಲಿ ಪೀಠವು ಕೇಳಿತು.
‘ಈ ಅರ್ಜಿಯು ದೇಶದಾದ್ಯಂತ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಅವುಗಳು ಪಡೆಯುವ ದೇಣಿಗೆಗೆ ಸಂಬಂಧಿಸಿದ್ದಾಗಿದೆ’ ಎಂದು ಹಂಸಾರಿಯಾ ಪೀಠಕ್ಕೆ ತಿಳಿಸಿದರು.
ಅರ್ಜಿಯ ವಿಚಾರಣೆಗೆ ಒಪ್ಪಿಕೊಂಡ ಪೀಠವು ಚುನಾವಣಾ ಆಯೋಗ, ಕೇಂದ್ರ ಸರ್ಕಾರ ಮತ್ತು ಬಿಜೆಪಿ ಹಾಗೂ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಮತ್ತು ಸಂಬಂಧಪಟ್ಟ ಇತರರಿಗೆ ನೋಟಿಸ್ ಜಾರಿ ಮಾಡಿತು.
1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13ಎ(ಡಿ) ಅನ್ನು ಅಸಾಂವಿಧಾನಿಕ ಎಂದು ರದ್ಧುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ. ಚುನಾವಣಾ ಬಾಂಡ್ ಯೋಜನೆಯನ್ನು ರದ್ಧುಗೊಳಿಸಿ ಸುಪ್ರೀಂ ಕೋರ್ಟ್ ಕಳೆದ ವರ್ಷ ನೀಡಿರುವ ತೀರ್ಪನ್ನೂ ಉಲ್ಲೇಖಿಸಲಾಗಿದೆ.
‘ರಾಜಕೀಯ ಪಕ್ಷಗಳು ತನಗೆ ಯಾವುದೇ ಮೊತ್ತದ ದೇಣಿಗೆ ನೀಡುವ ವ್ಯಕ್ತಿಯ ಹೆಸರು ಮತ್ತು ಇತರ ಎಲ್ಲ ವಿವರಗಳನ್ನು ಬಹಿರಂಗಪಡಿಸಬೇಕು. ರಾಜಕೀಯ ನಿಧಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ದೇಣಿಗೆಯನ್ನು ನಗದು ರೂಪದಲ್ಲಿ ಸ್ವೀಕರಿಸಲು ಸಾಧ್ಯವಿಲ್ಲ ಎಂಬ ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.