ADVERTISEMENT

ವಕೀಲರೊಬ್ಬರಿಗೆ ₹5 ಲಕ್ಷ ದಂಡ ವಿಧಿಸಿದ ಸುಪ್ರೀಂ ಕೋರ್ಟ್; ಹೇಳಿದ್ದೇನು?

ಪಿಟಿಐ
Published 22 ಏಪ್ರಿಲ್ 2025, 9:22 IST
Last Updated 22 ಏಪ್ರಿಲ್ 2025, 9:22 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ತಾವೇ ಅರ್ಜಿದಾರರಾಗಿದ್ದ ವಕೀಲರೊಬ್ಬರಿಗೆ ₹5 ಲಕ್ಷ ದಂಡ ವಿಧಿಸಿರುವ ಸುಪ್ರೀಂ ಕೋರ್ಟ್‌, ‘ನೀವು ನ್ಯಾಯಾಲಯದ ವಾತಾವರಣ ಹಾಳು ಮಾಡಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.

ನ್ಯಾ. ವಿಕ್ರಂ ನಾಥ್ ಮತ್ತು ನ್ಯಾ. ಸಂದೀಪ್ ಮೆಹ್ತಾ ಅವರಿದ್ದ ಪೀಠದ ಎದುರು ವಕೀಲ ಸಂದೀಪ್ ತೊಡಿ ಎಂಬುವವರು ತಮ್ಮದೇ ಕೌಟುಂಬಿಕ ಕಲಹದಲ್ಲಿ ವ್ಯಕ್ತಿಯೊಬ್ಬರಿಗೆ ಮುಂಬೈನ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಜಾಮೀನಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯಲ್ಲಿ ಕೇಂದ್ರ ಸರ್ಕಾರ, ಮುಂಬೈನ ಕೌಟುಂಬಿಕ ನ್ಯಾಯಾಲಯ ಮತ್ತು ಬಾಂಬೆ ಹೈಕೋರ್ಟ್ ಅನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

ADVERTISEMENT

‘ನೀವು ನ್ಯಾಯಾಲಯದ ವಾತಾವರಣ ಹಾಳು ಮಾಡಿದ್ದೀರಿ. ವಿವೇಕ ಇರುವ ಯಾವುದೇ ವಕೀಲರು ಸಂವಿಧಾನದ 32ನೇ ವಿಧಿಯಡಿ ಇಂಥ ಕ್ಲುಲ್ಲಕ ಅರ್ಜಿಯನ್ನು ಸಲ್ಲಿಸುವುದಿಲ್ಲ’ ಎಂದು ಅರ್ಜಿಯ ವಿಚಾರಣೆ ನಡೆಸಿದ ಪೀಠದಲ್ಲಿದ್ದ ನ್ಯಾ. ವಿಕ್ರಂ ನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ವ್ಯಕ್ತಿಗಳು ತಮ್ಮ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದರೆ ಅದನ್ನು ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಸಂಪರ್ಕಿಸಬಹುದು ಎಂದು ಸಾಂವಿಧಾನಿಕ ಹಕ್ಕುಗಳನ್ನು ಖಾತ್ರಿಪಡಿಸುವ 32ನೇ ವಿಧಿಯಲ್ಲಿ ಹೇಳಲಾಗಿದೆ.

ಅರ್ಜಿ ಸಲ್ಲಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್‌, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರಕ್ಕೆ ನಾಲ್ಕು ವಾರದೊಳಗೆ ₹5 ಲಕ್ಷ ದಂಡ ಭರಿಸುವಂತೆ ವಕೀಲ ತೋಡಿಗೆ ನಿರ್ದೇಶಿಸಿತು. ಜತೆಗೆ ಹಣ ಭರಿಸಲಾಗಿದೆಯೇ ಎಂದು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಲು ಆರು ವಾರಗಳ ಗಡುವನ್ನು ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.