
ನವದೆಹಲಿ: ಕಲಾಪಕ್ಕೆ ಅಡ್ಡಿಪಡಿಸಿದ ವಕೀಲೆಯೊಬ್ಬರನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಕೊಠಡಿಯಿಂದ ಬುಧವಾರ ಹೊರಗೆ ಕಳುಹಿಸಲಾಯಿತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಎನ್.ಕೆ. ಸಿಂಗ್ ಅವರಿದ್ದ ಪೀಠದ ಮುಂದೆ ಪಟ್ಟಿಯಿಂದ ಹೊರಗಿರುವ ವಿಷಯದ ಬಗ್ಗೆ ವಕೀಲೆಯು ನಿರಂತರವಾಗಿ ಪ್ರಸ್ತಾಪಿಸಿದ ವೇಳೆ ಈ ಘಟನೆ ನಡೆದಿದೆ.
‘ಮುಂಬೈನಲ್ಲಿದ್ದಾಗ ದೆಹಲಿ ಅತಿಥಿ ಗೃಹವೊಂದರಲ್ಲಿ ನನ್ನ ಆಪ್ತ ಸ್ನೇಹಿತೆಯನ್ನು ಕೊಲೆ ಮಾಡಲಾಗಿದೆ. ಆರಂಭದಲ್ಲಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ ಪೊಲೀಸ್ ಅಧಿಕಾರಿಯನ್ನು ಈಗ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ನೇಮಿಸಲಾಗಿದೆ’ ಎಂದು ವಕೀಲೆಯು ಆರೋಪಿಸಿದ್ದರು.
ಸೂಕ್ತ ಪ್ರಕ್ರಿಯೆ ಅನುಸರಿಸಿ ಸರಿಯಾದ ಅರ್ಜಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಸಲಹೆ ನೀಡಿದರು. ಆಗ, ವಕೀಲೆಯು, ‘ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ. ಮುಂದೆ ಹಾಗೆಯೇ ಮಾಡುತ್ತೇನೆ’ ಎಂದು ಹೇಳಿಯೂ ಅಲ್ಲಿಯೇ ನಿಂತಿದ್ದರು.
ಪ್ರಕರಣ ದಾಖಲಿಸಲು ಸಹಾಯ ಮಾಡುವಂತೆ ಅಲ್ಲಿ ಹಾಜರಿದ್ದ ವಕೀಲರನ್ನು ಪೀಠ ಕೇಳಿಕೊಂಡಿತು. ಆದರೆ, ಮುಂದಿನ ಪ್ರಕರಣದ ವಿಚಾರಣೆ ನಡೆದಾಗಲೂ ವಕೀಲೆಯು ತಮ್ಮ ವಾದವನ್ನು ಮುಂದುವರಿಸಿದರು. ಅವರನ್ನು ಹೊರಗೆ ಕಳುಹಿಸಲು ಕೋರ್ಟ್‌ನ ಮಹಿಳಾ ಮಾರ್ಷಲ್‌ಗಳು ಮುಂದಾದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ವಕೀಲೆಯು, ‘ಅನುಚಿತವಾಗಿ ವರ್ತಿಸಬೇಡಿ, ನನ್ನನ್ನು ಮುಟ್ಟಬೇಡಿ’ ಎಂದು ಕೂಗಾಡಿದರು.
ಸಭ್ಯತೆ ಕಾಯ್ದುಕೊಳ್ಳುವಂತೆ ನ್ಯಾಯಮೂರ್ತಿ ಭುಯಾನ್, ಸಹ ವಕೀಲರು ಸಲಹೆ ನೀಡಿದರೂ ವಕೀಲೆಯು ತಮ್ಮ ಸುರಕ್ಷತೆ ಬಗ್ಗೆ ಈ ನ್ಯಾಯಾಲಯದ ಗಮನಕ್ಕೆ ತರಲು ಬಯಸುವುದಾಗಿ ಹೇಳಿದರು.
ಇದೇ ವೇಳೆ ನ್ಯಾಯಾಲಯದ ಕಲಾಪಗಳ ಆನ್‌ಲೈನ್ ಪ್ರಸಾರವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು. ಕೊನೆಗೆ, ಅವರನ್ನು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕಳುಹಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.