ADVERTISEMENT

ಕಾಯ್ದೆ ದುರ್ಬಳಕೆ ಪ್ರವೃತ್ತಿಗೆ ಕಡಿವಾಣ: ಸುಪ್ರೀಂ ಕೋರ್ಟ್‌ಗೆ ಪಿ.ಚಿದಂಬರಂ ಮನವಿ

ಪಿಟಿಐ
Published 5 ಫೆಬ್ರುವರಿ 2023, 14:01 IST
Last Updated 5 ಫೆಬ್ರುವರಿ 2023, 14:01 IST
ಪಿ.ಚಿದಂಬರಂ
ಪಿ.ಚಿದಂಬರಂ   

ನವದೆಹಲಿ: ‘ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಅಂತ್ಯ ಹಾಕಬೇಕು’ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಪಿ.ಚಿದಂಬರಂ ಭಾನುವಾರ ಮನವಿ ಮಾಡಿದ್ದಾರೆ.

2019ರಲ್ಲಿನ ಜಾಮಿಯಾ ನಗರ ಹಿಂಸಾತ್ಮಕ ಕೃತ್ಯ ಘಟನೆಯ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಬಲಿಪಶು ಮಾಡಲಾಗಿತ್ತು ಎಂಬ ದೆಹಲಿ ಹೈಕೋರ್ಟ್‌ ಅಭಿಪ್ರಾಯದ ಹಿಂದೆಯೇ ಅವರು ಈ ಬಗ್ಗೆ ಗಮನಸೆಳೆದಿದ್ದಾರೆ.

ವಿಚಾರಣೆಯ ಹಂತದಲ್ಲಿ ಸೆರೆಯಲ್ಲಿಡಲು ಆಸ್ಪದ ನೀಡುವ ಕ್ರಿಮಿನಲ್‌ ನ್ಯಾಯಾಂಗ ವ್ಯವಸ್ಥೆಯು ಸಂವಿಧಾನಕ್ಕೆ ಅಪಮಾನ ಮಾಡುವುದಾಗಿದೆ. ಕಾಯ್ದೆ ದುರ್ಬಳಕೆಯ ಇಂಥ ಪ್ರವೃತ್ತಿಗೆ ಅಂತ್ಯವಾಡಬೇಕು ಎಂದೂ ಹೇಳಿದ್ದಾರೆ.

ADVERTISEMENT

ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಕಾರ್ಯಕರ್ತರಾದ ಶಾರ್ಜಿಲ್‌ ಇಮಾಮ್‌ ಮತ್ತು ಇತರೆ 10 ಜನರನ್ನು ಬಿಡುಗಡೆ ಮಾಡಿದ್ದ ದೆಹಲಿ ಹೈಕೋರ್ಟ್, ‘ಇವರನ್ನು ಬಲಿಪಶು ಮಾಡಲಾಗಿದೆ’ ಎಂದಿತ್ತು.

ಈ ಬೆಳವಣಿಗೆ ಕುರಿತು ಸರಣಿ ಟ್ವೀಟ್ ಮಾಡಿರುವ ಚಿದಂಬರಂ ಅವರು, ಬಂಧಿತ ಆರೋಪಿಗಳ ವಿರುದ್ಧ ಮೇಲ್ನೋಟಕ್ಕೆ ಕಾಣುವ ಸಾಕ್ಷ್ಯಗಳು ಇರಲಿಲ್ಲ ಎಂದಿದ್ದಾರೆ.

‘ಕೋರ್ಟ್‌ನ ಪ್ರಕಾರ, ಕೆಲ ಆರೋಪಿಗಳು ಮೂರುವರ್ಷದರೆಗೂ ಜೈಲಿನಲ್ಲಿದ್ದರು. ಕೆಲವರಿಗೆ ಕೆಲವು ತಿಂಗಳ ನಂತರ ಜಾಮೀನು ದೊರೆತಿದೆ. ಇದು, ವಿಚಾರಣೆ ಪೂರ್ವದ ಸೆರೆವಾಸ. ಸುಪ್ರೀಂ ಕೋರ್ಟ್‌ ಎಷ್ಟು ಸಾಧ್ಯವೋ ಅಷ್ಟು ಬೇಗ ಇಂಥ ಪ್ರವೃತ್ತಿಗೆ ಕಡಿವಾಣ ಹಾಕಬೇಕು’ ಎಂದೂ ಕೋರಿದ್ದಾರೆ.

‘ಅಸಮರ್ಥ ಪೊಲೀಸ್‌ ಅಧಿಕಾರಿಗಳು, ಅತಿ ಉತ್ಸಾಹದ ವಕೀಲರು ಹೀಗೆ ನಾಗರಿಕರನ್ನು ವಿಚಾರಣೆ ಪೂರ್ವದಲ್ಲಿ ಜೈಲಿನಲ್ಲಿ ಇಡಲು ಹೊಣೆಗಾರರು. ಅವರ ವಿರುದ್ಧ ಏನು ಕ್ರಮಕೈಗೊಳ್ಳಲಾಗುತ್ತದೆ? ಆರೋಪಿಗಳು ಜೈಲಿನಲ್ಲಿ ಕಳೆದ ದಿನಗಳನ್ನು ಅವರಿಗೆ ಕೊಡುವುದು ಸಾಧ್ಯವೇ? ಎಂದೂ ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.