ADVERTISEMENT

ಸರ್ಕಾರದ ಮೇಲ್ಮನವಿ ವಜಾಗೊಳಿಸಿದ ‘ಸುಪ್ರೀಂ’

‘ಮಹಾರಾಜ’ರ ಒಡೆತನದ 1561 ಎಕರೆ ಜಮೀನು:

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 20:23 IST
Last Updated 26 ಜುಲೈ 2021, 20:23 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌    

ನವದೆಹಲಿ: ಮೈಸೂರಿನಲ್ಲಿರುವ 1561.31 ಎಕರೆ ಜಮೀನಿನ ಒಡೆತನಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶದ ಸಿಂಧುತ್ವ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾಗೊಳಿಸಿದೆ.

‘ಸಾರ್ವಜನಿಕರು ಈ ಜಮೀನಿನಲ್ಲಿನ ನಿವೇಶನ ಖರೀದಿಸಿದ ದಶಕಗಳ ಬಳಿಕ ಸರ್ಕಾರವು ಒಡೆತನ ಸಾಧಿಸಲು ಮುಂದಾಗಿರುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಯು.ಯು. ಲಲಿತ್‌ ಹಾಗೂ ಅಜಯ್‌ ರಸ್ತೋಗಿ ಅವರಿದ್ದ ಪೀಠ ಹೇಳಿದೆ.

ನ್ಯಾಯಪೀಠದ ಈ ನಿರ್ಧಾರದಿಂದ ಈ ಜಮೀನಿನ ಮೇಲೆ ಹಕ್ಕು ಸ್ಥಾಪಿಸುವ ಸರ್ಕಾರದ ಯತ್ನ ವಿಫಲವಾದಂತಾಗಿದ್ದು, ಈಗಾಗಲೇ ಜಮೀನಿನಲ್ಲಿನ ನಿವೇಶನ ಖರೀದಿಸಿರುವ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ADVERTISEMENT

ಬ್ರಿಟಿಷ್ ಸರ್ಕಾರವು ಈ ಜಮೀನನ್ನು ಖರಾಬ್‌ ಜಮೀನು (ಸಾರ್ವಜನಿಕ ಆಸ್ತಿ) ಎಂದು ಎರಡು ವರ್ಷಗಳ ಕಾಲ ಸಮೀಕ್ಷೆ ನಡೆಸಿ, 1883ರಲ್ಲಿಯೇ ಘೋಷಿಸಿದೆ. ನಂತರ 1921ರಲ್ಲಿ ಇದನ್ನು ‘ಖರಾಬ್‌ ಜಮೀನು’ ಎಂದು ವರ್ಗೀಕರಿಸಿ ಆದೇಶ ನೀಡಿದೆ. ಆದರೂ, ಕೇಂದ್ರ ಸರ್ಕಾರದ 1950ರ ವಿಲೀನ ಒಪ್ಪಂದದ ಪ್ರಕಾರ ಮೈಸೂರಿನ ಮಹಾರಾಜರ ಒಡೆತನಕ್ಕೆ ಈ ಜಮೀನನ್ನು ನೀಡಲಾಗಿದೆ. ಖರಾಬ್‌ ಜಮೀನು ಮತ್ತು ಒಡೆತನ ಕುರಿತ ವ್ಯಾಖ್ಯಾನವನ್ನು ಹೈಕೋರ್ಟ್‌ ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಸರ್ಕಾರದ ಪರ ವಕೀಲ ರಂಜಿತ್‌ ಕುಮಾರ್‌ ವಾದ ಮಂಡಿಸಿದರು.

ಖರಾಬ್ ಜಮೀನನ್ನು ಒಡೆತನದೊಂದಿಗೆ ವರ್ಗೀಕರಿಸುವ ನಿಟ್ಟಿನಲ್ಲಿ ತಪ್ಪಾದ ಆದೇಶವನ್ನು ರವಾನಿಸಿರುವ ಹೈಕೋರ್ಟ್‌, ಗಂಭೀರ ಪ್ರಮಾದ ಎಸಗಿದೆ. ಅಲ್ಲದೆ, ವಿವಾದಿತ ಜಮೀನಿನ ಪೈಕಿ 600 ಎಕರೆ ಜಮೀನನ್ನು ಜನವಸತಿ ಪ್ರದೇಶ ಹಾಗೂ ಸಾರ್ವಜನಿಕ ಬಳಕೆಗೆ ಮೀಸಲಾಗಿದೆ ಎಂದು ಅವರು ಹೇಳಿದರು.

ಆದರೆ, 1950ರ ನಂತರ ಈ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದಾಗಿ ಸ್ವತಃ ರಾಜ್ಯ ಸರ್ಕಾರವೇ ಹೇಳಿದೆ. ಹಾಗಾಗಿ, ಈ ಜಮೀನು ಮಹಾರಾಜರಿಗೆ ಸೇರಿದ್ದು ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದು ಹೇಳಿದ ನ್ಯಾಯಪೀಠ ಮೇಲ್ಮನವಿಯನ್ನು ವಜಾಗೊಳಿಸಿತು.

ವಾಸಂತಿ ಹೆಗ್ಡೆ ಹಾಗೂ ಕುರುಬರಹಳ್ಳಿ ನಿವಾಸಿಗಳ ಪರ ವಕೀಲ ನಿಶಾಂತ್‌ ಪಾಟೀಲ ವಾದ ಮಂಡಿಸಿದರು.

1950ರ ವಿಲೀನ ಒಪ್ಪಂದದ ಪ್ರಕಾರ ಮೈಸೂರಿನ ಕುರುಬರಹಳ್ಳಿಯಲ್ಲಿ ಇರುವ ಈ ಜಮೀನಿನ ಒಡೆತನವು ‘ಮಹಾರಾಜ’ರಿಗೆ ಸೇರಿದ್ದು ಎಂದು 2020ರ ಡಿಸೆಂಬರ್‌ 19ರಂದು ಹೈಕೋರ್ಟ್‌ನ ವಿಭಾಗೀಯ ಪೀಠ ಆದೇಶ ನೀಡಿತ್ತು.

600 ಎಕರೆಯಲ್ಲಿ ಏನಿದೆ?

ಮೈಸೂರಿನಲ್ಲಿರುವ ಈ ಜಮೀನಿನ ಪೈಕಿ 600 ಎಕರೆ ಪ್ರದೇಶದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸೊತ್ತುಗಳಿವೆ. ಅರಣ್ಯ ಭೂಮಿ, ರಾಜ್ಯ ಆಡಳಿತ ತರಬೇತಿ ಸಂಸ್ಥೆ (ಎಟಿಐ), ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎಸ್‌ಐಆರ್‌ಡಿ), ಅಶ್ವದಳ, ಪ್ರಾಣಿ ಸಂಗ್ರಹಾಲಯ, ಕುದುರೆ ಪಾರ್ಕ್‌, ರೇಸ್‌ ಕೋರ್ಸ್‌, ಲಲಿತ ಮಹಲ್‌, ಹೆಲಿಪ್ಯಾಡ್‌, ಶೂಟಿಂಗ್‌ ರೇಂಜ್‌, ಮಸೀದಿ, ಪೊಲೀಸ್ ಇಲಾಖೆಯ ಮೋಟಾರು ವಿಭಾಗ, ಕಾರಂಜಿ ಮತ್ತು ತಾವರೆಕಟ್ಟೆ ಕೆರೆಗಳು ಇದರಲ್ಲಿ ಒಳಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.