ನವದೆಹಲಿ: ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಕೊಲಿಜಿಯಂ– ಎರಡೂ ಸಾಂವಿಧಾನಿಕ ಸಂಸ್ಥೆಗಳು. ಇವುಗಳಲ್ಲಿ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಶನಿವಾರ ಅಭಿಪ್ರಾಯಪಟ್ಟರು.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) 79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಎಸ್‌ಸಿಬಿಎ ಅಧ್ಯಕ್ಷ ವಿಕಾಸ್ ಸಿಂಗ್ ಅವರು, ‘ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿಕೆ ಮಾಡುವ ವಕೀಲರನ್ನೂ ಪರಿಗಣಿಸಿ’ ಎಂದು ಮನವಿ ಮಾಡಿದರು.
ಆಗ ಸಿಜೆಐ ಗವಾಯಿ ಅವರು, ‘ನ್ಯಾಯಮೂರ್ತಿಗಳ ನೇಮಕಕ್ಕೆ ನಿರ್ದಿಷ್ಟ ಹೆಸರು ಶಿಫಾರಸು ಮಾಡುವಂತೆ ಹೈಕೋರ್ಟ್ ಕೊಲಿಜಿಯಂಗೆ, ಸುಪ್ರೀಂ ಕೋರ್ಟ್ ಕೊಲಿಜಿಯಂ ಆದೇಶ ಮಾಡುವಂತಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ನ್ಯಾಯಮೂರ್ತಿಗಳ ನೇಮಕ ವಿಚಾರದಲ್ಲಿ ಹೈಕೋರ್ಟ್ ಕೊಲಿಜಿಯಂ ಮೊದಲಿಗೆ ನಿರ್ಧಾರ ಕೈಗೊಳ್ಳುತ್ತದೆ. ಹೈಕೋರ್ಟ್ ಕೊಲಿಜಿಯಂಗೆ ನಾವು ಕೆಲವು ಹೆಸರುಗಳನ್ನು ಶಿಫಾರಸು ಮಾಡುತ್ತೇವೆ ಮತ್ತು ಅವುಗಳನ್ನು ಪರಿಗಣಿಸುವಂತೆ ಮನವಿ ಮಾಡುತ್ತೇವೆ. ಅಂತಿಮವಾಗಿ ಹೈಕೋರ್ಟ್ ಕೊಲಿಜಿಯಂ ಅರ್ಹ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿ ಸುಪ್ರೀಂ ಕೋರ್ಟ್‌ಗೆ ಕಳುಹಿಸುತ್ತದೆ’ ಎಂದು ವಿವರಿಸಿದರು.
ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿದ್ದಾಗ, ಅಭ್ಯರ್ಥಿಗಳೊಂದಿಗೆ ಸಂದರ್ಶನ ನಡೆಸುವ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಅಭ್ಯರ್ಥಿಗಳೊಂದಿಗೆ 10 ನಿಮಿಷ, 15 ನಿಮಿಷ ಅಥವಾ ಅರ್ಧ ತಾಸು ಸಂವಾದ ನಡೆಸಿದಾಗ ಸಮಾಜದ ಸೇವೆ ಸಲ್ಲಿಸಲು ಅವರು ಯೋಗ್ಯರೇ ಎಂಬುದನ್ನು ಪರಿಶೀಲಿಸಬಹುದು ಎಂದು ಅವರು ಹೇಳಿದರು.
ಸ್ವಾತಂತ್ರ್ಯೋತ್ಸವನ್ನು ಉಲ್ಲೇಖಿಸಿ, ಸ್ವಾತಂತ್ರ್ಯವು ರಾಜಕೀಯ ಚಳವಳಿ ಅಷ್ಟೇ ಅಲ್ಲ, ನೈತಿಕ ಮತ್ತು ಕಾನೂನಾತ್ಮಕ ಹೋರಾಟವೂ ಆಗಿತ್ತು. ಅಸಂಖ್ಯಾತ ವಕೀಲರು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ದೇಶದ ಇತಿಹಾಸವು ತಿಳಿಸಿಕೊಡುತ್ತದೆ ಎಂದು ಹೇಳಿದರು.
ರವೀಂದ್ರನಾಥ ಟ್ಯಾಗೋರ್, ಮಹಾತ್ಮ ಗಾಂಧಿ, ಬಿ.ಆರ್.ಅಂಬೇಡ್ಕರ್, ಮೌಲಾನಾ ಅಬುಲ್ ಕಲಾಮ್ ಆಜಾದ್ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರನ್ನು ಅವರು ಸ್ಮರಿಸಿದರು. ದುರ್ಬಲರ ಸ್ವಾತಂತ್ರ್ಯವನ್ನು ವಿಸ್ತರಿಸುವ ಮತ್ತು ಅವರ ಹಕ್ಕುಗಳನ್ನು ರಕ್ಷಿಸುವ ಮೂಲಕ ನಾವು ಕಾನೂನನ್ನು ವ್ಯಾಖ್ಯಾನಿಸಿ, ಬಲಪಡಿಸಬೇಕಾಗಿದೆ. ಆಗ ಮಾತ್ರ ಟ್ಯಾಗೋರ್ ಅವರ ಪ್ರಾರ್ಥನೆ, ಮಹಾತ್ಮ ಗಾಂಧಿ ಅವರ ಸ್ವರಾಜ್ಯ, ಅಂಬೇಡ್ಕರ್ ಅವರ ಪ್ರಜಾಪ್ರಭುತ್ವ ಚಿಂತನೆ ಫಲಿಸುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.