ADVERTISEMENT

ಮುಲ್ಲಪೆರಿಯಾರ್‌ ಬದಲು ಹೊಸ ಅಣೆಕಟ್ಟೆ: ಕೇಂದ್ರ, ಕೇರಳ, ತಮಿಳುನಾಡಿಗೆ ನೋಟಿಸ್‌

ಪಿಟಿಐ
Published 13 ಅಕ್ಟೋಬರ್ 2025, 15:05 IST
Last Updated 13 ಅಕ್ಟೋಬರ್ 2025, 15:05 IST
...
...   

ನವದೆಹಲಿ: ಮುಲ್ಲಪೆರಿಯಾರ್‌ ಅಣೆಕಟ್ಟೆ ಬದಲಿಗೆ ಹೊಸ ಅಣೆಕಟ್ಟೆ ನಿರ್ಮಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರ, ತಮಿಳುನಾಡು, ಕೇರಳ ಸರ್ಕಾರಗಳು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಎನ್‌ಡಿಎಂಎ) ಸೋಮವಾರ ನೋಟಿಸ್‌ ಜಾರಿ ಮಾಡಿದೆ.

130 ವರ್ಷ ಹಳೆಯದಾದ ಮುಲ್ಲಪೆರಿಯಾರ್‌ ಅಣೆಕಟ್ಟೆಯ ಸುರಕ್ಷತೆ ಮತ್ತು ಸ್ಥಿರತೆಯ ಕುರಿತು ಕಳವಳ ವ್ಯಕ್ತಪಡಿಸಿ ‘ಸೇವ್‌ ಕೇರಳ ಬ್ರಿಗೇಡ್‌’ ಸಲ್ಲಿಸಿದ್ದ ಅರ್ಜಿಯ ಕುರಿತು ಮುಖ್ಯ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್‌ ಚಂದ್ರನ್‌ ಅವರನ್ನು ಒಳಗೊಂಡ ಪೀಠವು ಪ್ರತಿಕ್ರಿಯೆ ಕೇಳಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ.ಗಿರಿ ಅವರು, ‘ಈ ಹಳೆಯ ಅಣೆಕಟ್ಟೆ ಕೇರಳದ ಕೆಳಭಾಗದಲ್ಲಿ ವಾಸಿಸುತ್ತಿರುವ ಸುಮಾರು ಒಂದು ಕೋಟಿ ಜನರು ಮತ್ತು ಆಸ್ತಿಗಳಿಗೆ ತೀವ್ರ ಬೆದರಿಕೆಯನ್ನುಂಟು ಮಾಡುತ್ತದೆ. ಸಾರ್ವಜನಿಕರ ಸುರಕ್ಷತೆಗಾಗಿ ಹೊಸ ಅಣೆಕಟ್ಟೆ ನಿರ್ಮಿಸಲು ನ್ಯಾಯಾಲಯ ನಿರ್ದೇಶನ ನೀಡಬೇಕು’ ಎಂದರು.

ADVERTISEMENT

‘ಅಸ್ತಿತ್ವದಲ್ಲಿರುವ ಅಣೆಕಟ್ಟೆ ಬಲಪಡಿಸಲು ಕೆಲವು ನಿರ್ದೇಶನಗಳ ಅಗತ್ಯವಿದೆ. ಹೊಸ ಅಣೆಕಟ್ಟು ನಿರ್ಮಾಣಕ್ಕೆ ಸಂಬಂಧಿಸಿದ ಸುರಕ್ಷತೆ ಮತ್ತು ಕಾರ್ಯಸಾಧ್ಯತೆ ಕುರಿತು ನಿರ್ಣಯಿಸಲು ಪರಿಣಿತರ ತಂಡಕ್ಕೆ ಸೂಚಿಸಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.