ADVERTISEMENT

ಅಪರಾಧ ಕೃತ್ಯವೆಸಗಿದ ಮಕ್ಕಳಿಗೆ ಜೀವಾವಧಿ ಶಿಕ್ಷೆ ಸಲ್ಲ: ಸುಪ್ರೀಂ ಕೋರ್ಟ್‌

1979ರ ಕೊಲೆ ಪ್ರಕರಣದಲ್ಲಿ ಅಪರಾಧಿ ಈಗ ಬಂಧಮುಕ್ತ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 3:36 IST
Last Updated 10 ಜನವರಿ 2022, 3:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: 1979ರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 58 ವರ್ಷದ ವ್ಯಕ್ತಿಯೊಬ್ಬರು ಕೃತ್ಯ ನಡೆದ ಸಂದರ್ಭದಲ್ಲಿ ವಯಸ್ಕರಾಗಿರಲಿಲ್ಲಎಂಬುದು ಬೆಳಕಿಗೆ ಬಂದಿದ್ದು, ವ್ಯಕ್ತಿಯನ್ನು ತಕ್ಷಣವೇ ಜೈಲಿನಿಂದ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಕೊಲೆ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿದಾಗ ಆತನಿಗೆ ಕೇವಲ 17 ವರ್ಷ ವಯಸ್ಸಾಗಿತ್ತು ಎಂದು ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರ ರಾವ್‌ ಮತ್ತು ಹರಿಕೇಶ್‌ ರಾಯ್‌ ಅವರನ್ನೊಳಗೊಂಡ ಪೀಠವೊಂದು ಉಲ್ಲೇಖಿಸಿದೆ.

ಕಾನೂನು ಸಲಹೆಗಾರ ದೀಪಕ್‌ ಕುಮಾರ್‌ ಜೆನಾ ಅವರ ಮೂಲಕ ಆರೋಪಿ ವಿಜಯ್‌ ಪಾಲ್‌ ಅವರು 2018ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿಯೊಂದನ್ನು ಸಲ್ಲಿಸಿದ್ದರು. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿಯು ಕೃತ್ಯ ನಡೆದಾಗ ತಾವು ವಯಸ್ಕರಾಗಿರಲಿಲ್ಲ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.

ADVERTISEMENT

ಈ ಕುರಿತು ಬಾಲ ನ್ಯಾಯಮಂಡಳಿ ಸಹಕಾರದಿಂದ ತನಿಖೆ ನಡೆಸಿ ವರದಿ ನೀಡುವಂತೆ ಸುಪ್ರೀಂಕೋರ್ಟ್‌ 2018ರ ಜುಲೈ 13 ರಂದು ಜಿಲ್ಲಾ ನ್ಯಾಯಾಧೀಶ ಹರ್ದೋಯಿ ಅವರಿಗೆ ನಿರ್ದೇಶನ ನೀಡಿತ್ತು.

ಆರೋಪಿಯ ವಯಸ್ಸಿನ ಬಗ್ಗೆ ತಿಳಿಯಲು ಶಾಲಾ ದಾಖಲೆಗಳು ಲಭ್ಯವಿಲ್ಲ ಎಂದು ಬಾಲ ನ್ಯಾಯ ಮಂಡಳಿ ವರದಿ ಸಲ್ಲಿಸಿತ್ತು.

ನಂತರ 2018ರ ಅಕ್ಟೋಬರ್‌ 12 ರಂದು ಫರುಖಾಬಾದ್‌ ಜಿಲ್ಲಾ ವೈದ್ಯಕೀಯ ಮಂಡಳಿಯು ನಡೆಸಿದ ಆರೋಪಿಯ ಅಸ್ಥಿ ಪರೀಕ್ಷೆಯಲ್ಲಿ, ಈಗ ವ್ಯಕ್ತಿಗೆ 55 ವರ್ಷ ವಯಸ್ಸಾಗಿದೆ ಎಂದು ವರದಿ ನೀಡಿತ್ತು.

ಇದನ್ನು ಪರಿಗಣಿಸಿದರೆ ಕೃತ್ಯ ನಡೆದ 1979ರ ಜುಲೈ 11 ರಂದು ಆರೋಪಿಗೆ 16 ವರ್ಷ ಎಂಟು ತಿಂಗಳು ಆಗಿತ್ತು ಎಂದು ವೈದ್ಯಕೀಯ ಮಂಡಳಿ ಅಭಿಪ್ರಾಯಪಟ್ಟಿದೆ.

‘ಬಾಲ ನ್ಯಾಯ ಮಂಡಳಿಯ ವರದಿಯನ್ನು ನ್ಯಾಯಾಲಯ ಪರಿಗಣಿಸುತ್ತದೆ. ಇದರ ಪ್ರಕಾರ ಕೃತ್ಯ ನಡೆದಾಗ ಆರೋಪಿಯು ಬಾಲಪರಾಧಿಯಾಗಿದ್ದ. ಆದ್ದರಿಂದ ಅವರನ್ನು ತಕ್ಷಣ ಬಿಡುಗಡೆಗೊಳಿಸಿ’ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಆರೋಪಿ ಈಗಾಗಲೇ 17 ವರ್ಷ ಜೈಲು ವಾಸ ಪೂರ್ಣಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.