ADVERTISEMENT

ವಾಕ್ ಸ್ವಾತಂತ್ರ್ಯ: ಅಪಹಾಸ್ಯಕ್ಕೆ ಕ್ಷಮೆ ಕೇಳಲು ಯೂಟ್ಯೂಬರ್‌ಗಳಿಗೆ ಕೋರ್ಟ್ ಸೂಚನೆ

ಪಿಟಿಐ
Published 25 ಆಗಸ್ಟ್ 2025, 10:11 IST
Last Updated 25 ಆಗಸ್ಟ್ 2025, 10:11 IST
   

ನವದೆಹಲಿ: ವಾಣಿಜ್ಯ ಉದ್ದೇಶದ ಹಾಗೂ ನಿಷೇಧಿತ ಭಾಷಣಗಳು ಮೂಲಭೂತ ಹಕ್ಕುಗಳಡಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್‌, ಅಂಗವಿಕಲರು ಹಾಗೂ ಅಪರೂಪದ ಆನುವಂಶಿಕ ಸಮಸ್ಯೆಗಳಿಂದ ಬಳಲುವವರನ್ನು ಅವಹೇಳನ ಮಾಡಿದ್ದಕ್ಕಾಗಿ ಬೇಷರತ್‌ ಕ್ಷಮೆ ಯಾಚಿಸುವಂತೆ ಐವರು ಸಾಮಾಜಿಕ ಮಾಧ್ಯಮ ಇನ್‌ಫ್ಲುಯೆನ್ಸರ್‌ಗಳಿಗೆ ಸೋಮವಾರ ಸೂಚಿಸಿದೆ.

‘ಇಂಡಿಯಾ’ಸ್ ಗಾಟ್‌ ಲೇಟೆಂಟ್’ ಕಾರ್ಯಕ್ರಮ ನಡೆಸಿಕೊಡುವ ಸಮಯ್‌ ರೈನಾ ಸೇರಿ ಐವರು ಇನ್‌ಫ್ಲುಯೆನ್ಸರ್‌ಗಳು ತಮ್ಮ ಪಾಡ್‌ಕಾಸ್ಟ್‌ ಅಥವಾ ಕಾರ್ಯಕ್ರಮಗಳಲ್ಲಿ ಬೇಷರತ್‌ ಕ್ಷಮೆ ಯಾಚಿಸಿ. ಕ್ಷಮೆ ಯಾಚಿಸಿರುವ ಕುರಿತು ಅದೇ ಕಾರ್ಯಕ್ರಮಗಳಲ್ಲಿ ಪ್ರಕಟಿಸಿ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರು ಇದ್ದ ಪೀಠ ನಿರ್ದೇಶನ ನೀಡಿದೆ.

ರೈನಾ ಅಲ್ಲದೇ, ಇನ್‌ಫ್ಲುಯೆನ್ಸರ್‌ಗಳಾದ ವಿಪುಲ್‌ ಗೋಯಲ್, ಬಲರಾಜ್‌ ಪರಂಜೀತ್‌ ಸಿಂಗ್‌ ಘಾಯ್, ಸೋನಾನಿ ಠಕ್ಕರ್ ಅಲಿಯಾಸ್ ಸೋನಾಲಿ ಆದಿತ್ಯ ದೇಸಾಯಿ ಹಾಗೂ ನಿಶಾಂತ್ ಜಗದೀಶ್‌ ತನ್ವರ್‌ ಆರೋಪಿಗಳಾಗಿದ್ದಾರೆ. ಸೋನಾಲಿ ಹೊರತುಪಡಿಸಿ ಉಳಿದ ನಾಲ್ವರು ನ್ಯಾಯಾಲಯದಲ್ಲಿ ಹಾಜರಿದ್ದರು.

ADVERTISEMENT

‘ಎಸಗಿದ ಅಪರಾಧ ಕೃತ್ಯದ ತೀವ್ರತೆಗಿಂತ ಅದಕ್ಕಾಗಿ ವ್ಯಕ್ತಪಡಿಸುವ ಪಶ್ಚಾತ್ತಾಪದ ಮಟ್ಟ ದೊಡ್ಡದಿರಬೇಕು. ಅಂಗವಿಕಲ ವ್ಯಕ್ತಿಗಳನ್ನು ಅವಹೇಳನ ಮಾಡಿರುವ ಸಾಮಾಜಿಕ ಮಾಧ್ಯಮಗಳ ಇನ್‌ಫ್ಲುಯೆನ್ಸರ್‌ಗಳಿಗೆ ನಂತರದ ದಿನಗಳಲ್ಲಿ ದಂಡ ವಿಧಿಸಲು ಪರಿಗಣಿಸಲಾಗುವುದು’ ಎಂದು ಪೀಠ ಸ್ಪಷ್ಟಪಡಿಸಿದೆ.

‘ಮಾಡಿರುವ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು’ ಎಂದ ನ್ಯಾಯಮೂರ್ತಿ ಸೂರ್ಯಕಾಂತ, ‘ನೀವು ಎಷ್ಟು ದಂಡ ಪಾವತಿಸಲು ಸಿದ್ಧರಿದ್ದೀರಿ?. ಸ್ಪೈನಲ್‌ ಮಸ್ಕುಲರ್ ಅಟ್ರೊಫಿ(ಎಸ್‌ಎಂಎ) ಸೇರಿ ವಿರಳ ಆನುವಂಶಿಕ ಸಮಸ್ಯೆಗಳಿಂದ ಬಳಲುವವರ ಚಿಕಿತ್ಸೆಗೆ ಆ ದಂಡದ ಹಣವನ್ನು ಬಳಸಿಕೊಳ್ಳಬಹುದು’ ಎಂದು ಇನ್‌ಫ್ಲುಯೆನ್ಸರ್‌ಗಳನ್ನು ಉದ್ದೇಶಿಸಿ ಹೇಳಿದರು.

‘ಅಂಗವಿಕಲರು ಸೇರಿ ವಿವಿಧ ಸಮುದಾಯಗಳ ಕುರಿತು ಹಾಸ್ಯ ಸೃಷ್ಟಿಸುವ ವೇಳೆ ಇನ್‌ಫ್ಲುಯೆನ್ಸರ್‌ಗಳು ಬಹಳ ಎಚ್ಚರಿಕೆಯಿಂದ ಇರಬೇಕು’ ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು.

ಅಂಗವಿಕಲರನ್ನು ಅವಹೇಳನ ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿ, ವಿಚಾರಣೆಗೆ ಹಾಜರಾಗುವಂತೆ ಈ ಐವರು ಇನ್‌ಫ್ಲುಯೆನ್ಸರ್‌ಗಳಿಗೆ ಸುಪ್ರೀಂ ಕೋರ್ಟ್‌ ಜುಲೈ 15ರಂದು ನೋಟಿಸ್‌ ಜಾರಿ ಮಾಡಿತ್ತು.

ಇವರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ‘ಕ್ಯೂರ್ ಎಸ್‌ಎಂಎ ಫೌಂಡೇಷನ್‌ ಆಫ್‌ ಇಂಡಿಯಾ’, ಕೋರ್ಟ್‌ ಮೆಟ್ಟಿಲೇರಿತ್ತು. ಸಂಸ್ಥೆ ಪರವಾಗಿ ಹಿರಿಯ ವಕೀಲೆ ಅಪರಾಜಿತಾ ಸಿಂಗ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.