ADVERTISEMENT

ಆಯುಕ್ತರ ನೇಮಕಕ್ಕೆ ಸಮಿತಿ: ಪರಿಣತರ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 4:45 IST
Last Updated 3 ಮಾರ್ಚ್ 2023, 4:45 IST
   

ನವದೆಹಲಿ: ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಕುರಿತು ಪರಿಣತರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಈ ತೀರ್ಪನ್ನು ಶ್ಲಾಘಿಸಿದ್ದಾರೆ. ಕಡ್ಡಾಯವಾಗಿ ಕಾನೂನು ಮಾಡಿ ಎಂದು ಹೇಳಿದರೆ ಕಾರ್ಯಾಂಗ ಮತ್ತು ಶಾಸಕಾಂಗದ ಕೆಲಸವನ್ನು ನ್ಯಾಯಾಲಯ ಮಾಡಿದಂತಾಗುತ್ತದೆ ಎಂದು ಕೆಲವರು ಹೇಳಿದ್ದಾರೆ. ಬಿಜೆಪಿಯೇತರ ಪಕ್ಷಗಳ ಮುಖಂಡರು ತೀರ್ಪನ್ನು ಸ್ವಾಗತಿಸಿದ್ದಾರೆ.

‘20ಕ್ಕೂ ಹೆಚ್ಚು ವರ್ಷಗಳಿಂದ ಆಯೋಗ ಈ ಬೇಡಿಕೆ ಮುಂದಿಟ್ಟಿತ್ತು. ಮುಖ್ಯ ಚುನಾವಣಾ ಆಯುಕ್ತರು ಈ ಕುರಿತು ಹಲವು ಬಾರಿ ಬೇಡಿಕೆ ಮಂಡಿಸಿದ್ದರು. ನಾನು ಕೂಡ ಮುಖ್ಯ ಚುನಾವಣಾ ಆಯುಕ್ತ ಆಗಿದ್ದಾಗ ಈ ಕುರಿತು ಪತ್ರ ಬರೆದಿದ್ದೆ’ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ. ಖುರೇಷಿ ಹೇಳಿದ್ದಾರೆ.

‘ಅಧಿಕಾರ ಇಲ್ಲದಲ್ಲಿ ನೀವು (ಕೋರ್ಟ್‌) ಶಾಸನ ರಚಿಸುತ್ತಿದ್ದೀರಿ. ನೀವು ಕಾಯ್ದೆಯನ್ನು ‌ವ್ಯಾಖ್ಯಾನಿಸಬಹುದು. ಸಂವಿಧಾನವನ್ನು ವ್ಯಾಖ್ಯಾನಿಸಬಹುದು. ಅದು ಸರಿ. ಹೆಚ್ಚಿನ ಪಾರದರ್ಶಕತೆ ಬೇಕು ಎಂದು ನ್ಯಾಯಾಲಯ ಹೇಳಿದ್ದರೆ ಸಾಕಿತ್ತು. ನ್ಯಾಯಮೂರ್ತಿಗಳ ನೇಮಕದ ವಿಚಾರದಲ್ಲಿಯೂ ಪಾರದರ್ಶಕತೆ ಬೇಕು, ಪ್ರಕ್ರಿಯೆ ಬೇಕು’ ಎಂದು ಕೇಂದ್ರ ಕಾನೂನು ಇಲಾಖೆಯ ನಿವೃತ್ತ ಕಾರ್ಯದರ್ಶಿ ಪಿ.ಕೆ. ಮಲ್ಹೋತ್ರಾ ಹೇಳಿದ್ದಾರೆ.

ADVERTISEMENT

ಇದು ಸ್ವಾಗತಾರ್ಹ ತೀರ್ಪು ಎಂದು ಲೋಕಸಭೆಯ ನಿವೃತ್ತ ಮಹಾ ಪ್ರಧಾನ ಕಾರ್ಯದರ್ಶಿ ಪಿ.ಡಿ.ಟಿ. ಆಚಾರಿ ಹೇಳಿದ್ದಾರೆ. ಈತನಕ, ಇತರ ಸಂಸ್ಥೆಗಳ ಜೊತೆ ಸಮಾಲೋಚನೆ ನಡೆಸದೆಯೇ ಸರ್ಕಾರ ಆಯುಕ್ತರ ನೇಮಕ ಮಾಡುತ್ತಿತ್ತು ಎಂದು ಅವರು ಹೇಳಿದ್ದಾರೆ.

‘ಈ ತೀರ್ಪು ಅತ್ಯಂತ ತಾತ್ಕಾಲಿಕ ಸ್ವರೂಪದ್ದಾಗಿದೆ. ಸಂಸತ್ತು ಕಾಯ್ದೆ ರೂಪಿಸುವವರೆಗೆ ಮಾತ್ರ ಇದು ಜಾರಿಯಲ್ಲಿರುತ್ತದೆ. ಸರ್ಕಾರವು ಬೇರೆಯದೇ ರೀತಿಯ ಕಾಯ್ದೆ ಮಾಡಬಹುದು. ಸರ್ಕಾರಕ್ಕೆ ಅನುಕೂಲ ಆಗುವ ರೀತಿಯಲ್ಲಿಯೇ ಅದು ಇರಬಹುದು. ಹಾಗಾಗಿ, ಸುಪ್ರೀಂ ಕೋರ್ಟ್‌ನ ತೀರ್ಪು ಹೆಚ್ಚು ಪ್ರಜಾಸತ್ತಾತ್ಮಕವಾಗಿದ್ದರೂ ಅಂತಿಮ ಅಲ್ಲ’ ಎಂದು ಆಚಾರಿ ಅವರು ವಿವರಿಸಿದ್ದಾರೆ.

‘ಹಾಗಿದ್ದರೆ ನ್ಯಾಯಮೂರ್ತಿಗಳನ್ನು ನೇಮಿಸುವ ಸಮಿತಿಗೆ ಪ್ರಧಾನಿಯು ಮುಖ್ಯಸ್ಥರಾಗಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಿವೃತ್ತ ಮುಖ್ಯ ಚುನಾವಣಾ ಆಯುಕ್ತರೊಬ್ಬರು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಮತ್ತು ಆಯುಕ್ತರನ್ನು ನೇಮಿಸಲು ಮೂವರು ಸದಸ್ಯರ ಸಮಿತಿ ಇರಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎ.ಪಿ.ಶಾ ನೇತೃತ್ವದ 20ನೇ ಕಾನೂನು ಆಯೋಗವು ಸಲಹೆ ಕೊಟ್ಟಿತ್ತು.

‘ಚುನಾವಣಾ ಆಯೋಗವು ತಟಸ್ಥವಾಗಿದೆ ಎಂಬುದನ್ನು ಖಾತರಿಪಡಿಸುವುದು ಮುಖ್ಯ. ಹಾಗಾಗಿ, ಕಾರ್ಯಾಂಗದ ಹಸ್ತಕ್ಷೇಪದಿಂದ ಆಯೋಗವನ್ನು ರಕ್ಷಿಸಬೇಕು. ಆಯುಕ್ತರ ನೇಮಕವು ಸಮಾಲೋಚನೆ ಮೂಲಕ ನಡೆಯಬೇಕು’ ಎಂದು ಕಾನೂನು ಆಯೋಗದ ವರದಿಯಲ್ಲಿ ಹೇಳಲಾಗಿತ್ತು.

ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಆಯೋಗವನ್ನು ಬಲಪಿಪಡಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆ. ಇಂತಹ ಕ್ರಮಗಳ ಮೂಲಕ ಮಾತ್ರವೇ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸಾಧ್ಯವಾಗಬಹುದು ಎಂದು ಸಿಪಿಎಂ ಹೇಳಿದೆ.

****

ಮುಖ್ಯ ಚುನಾವಣಾ ಆಯುಕ್ತರಾಗಿ ಬಡ್ತಿಯು ಸೇವಾ ಜ್ಯೇಷ್ಠತೆಯ ಆಧಾರದಲ್ಲಿ ಆಗಬೇಕು. ಚುನಾವಣಾ ಆಯುಕ್ತರ ನೇಮಕವು ಕೊಲಿಜಿಯಂ ಮೂಲಕವೇ ಆಗಬೇಕು

-ಎಸ್‌.ವೈ. ಖುರೇಷಿ, ಮಾಜಿ ಮುಖ್ಯ ಚುನಾವಣಾ ಆಯುಕ್ತ

ಸಂವಿಧಾನ ಪ್ರಕಾರ, ಕಾರ್ಯಾಂಗದ ವ್ಯಾಪ್ತಿಗೆ ಬರುವ ವಿಚಾರದಲ್ಲಿ ನಿರ್ದೇಶನ ನೀಡಲಾಗಿದೆ. ನಿರ್ದೇಶನ ನೀಡುವ ಅಧಿಕಾರ ಇದೆ ಎಂಬ ಕಾರಣಕ್ಕೆ ಕೋರ್ಟ್‌ ಹೀಗೆ ಮಾಡಿದೆ

-ಪಿ.ಕೆ. ಮಲ್ಹೋತ್ರಾ, ಕೇಂದ್ರ ಕಾನೂನು ಇಲಾಖೆಯ ನಿವೃತ್ತ ಕಾರ್ಯದರ್ಶಿ

ನಿರ್ಧಾರ ಕೈಗೊಳ್ಳುವಿಕೆ ಪ್ರಕ್ರಿಯೆಯಲ್ಲಿ ಈಗ ಶಾಸಕಾಂಗ ಮತ್ತು ನ್ಯಾಯಾಂಗವೂ ಭಾಗಿಯಾದಂತಾಗುತ್ತದೆ. ಇದು ಮಹತ್ವದ ಬೆಳವಣಿಗೆ

-ಪಿ.ಡಿ.ಟಿ. ಆಚಾರಿ, ಲೋಕಸಭೆಯ ನಿವೃತ್ತ ಮಹಾ ಪ್ರಧಾನ ಕಾರ್ಯದರ್ಶಿ

ಬಿಜೆಪಿ ನೇತೃತ್ವದ ಸರ್ಕಾರವು ಸಂಸ್ಥೆಗಳನ್ನು ದುರ್ಬಳಕೆ ಮಾಡುವುದನ್ನು ತಡೆಯಲು ಮಹತ್ವದ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯ ಇದೆ

-ಅಭಿಷೇಕ್‌ ಮನು ಸಿಂಘ್ವಿ, ಕಾಂಗ್ರೆಸ್‌ ವಕ್ತಾರ

ಸುಪ್ರೀಂ ಕೋರ್ಟ್‌ನ ತೀರ್ಪು ಪ್ರಜಾಪ್ರಭುತ್ವದ ಗೆಲುವು. ದಮನಕಾರಿ ಶಕ್ತಿಗಳ ಅನಾಹುತಕಾರಿ ಪ್ರಯತ್ನಗಳ ಮೇಲೆ ಜನರ ಇಚ್ಛೆಗೇ ಗೆಲುವು ದೊರಕುತ್ತದೆ

-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.