.
ನವದೆಹಲಿ: ಕಾವಡ್ ಯಾತ್ರೆಯ ಮಾರ್ಗದಲ್ಲಿನ ಆಹಾರ ಮಳಿಗೆಗಳಿಗೆ ಕ್ಯೂಆರ್ ಕೋಡ್ ಪ್ರದರ್ಶಿಸುವಂತೆ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ಸರ್ಕಾರ ಹೊರಡಿಸಿರುವ ಹೊಸ ನಿರ್ದೇಶನದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಯಾತ್ರಾ ಮಾರ್ಗದಲ್ಲಿನ ಮಾರಾಟಗಾರರು ತಮ್ಮ ಗುರುತು ಬಹಿರಂಗಪಡಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ 2024ರಲ್ಲಿ ನೀಡಿದ್ದ ತೀರ್ಪಿಗೆ ಈ ನಿರ್ದೇಶನ ವಿರುದ್ಧವಾಗಿದೆ ಎಂದು ಪ್ರೊ. ಅಪೂರ್ವಾನಂದ ಝಾ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಢಾಬಾ ಅಥವಾ ರೆಸ್ಟೊರೆಂಟ್ ಹಾಗೂ ಮಳಿಗೆಗಳ ಮುಂಭಾಗ ಅವುಗಳ ಮಾಲೀಕರು ಮತ್ತು ನೌಕರರ ಗುರುತನ್ನು ಬಹಿರಂಗಪಡಿಸಬೇಕು ಎಂಬುದು ಸಂವಿಧಾನದ 14, 15, 17, 19 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ ಎನ್ನಲಾಗಿದೆ.
‘ಗ್ರಾಹಕರಿಗೆ ಮಾಲೀಕರ ವಿವರ ಲಭ್ಯವಿರಬೇಕು. ಅದಕ್ಕಾಗಿಯೇ ಕ್ಯೂಆರ್ ಕೋಡ್ ಪ್ರದರ್ಶಿಸಬೇಕು’ ಎಂದು ಎರಡೂ ಸರ್ಕಾರಗಳು ಹೊರಡಿಸಿರುವ ಆದೇಶವನ್ನು ವರದಿ ಮಾಡಿರುವ ಕೆಲವು ಮಾಧ್ಯಮಗಳ ಪ್ರತಿಯನ್ನು ಅರ್ಜಿಯ ಜೊತೆ ಲಗತ್ತಿಸಲಾಗಿದೆ.
ಎರಡೂ ಸರ್ಕಾರಗಳ ಈ ಕ್ರಮವು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಹಾಗೂ ಅಸಾಂವಿಧಾನಿಕ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ಆದೇಶವನ್ನು ಹಿಂಪಡೆಯುವಂತೆ ನಿರ್ದೇಶನ ನೀಡುವಂತೆ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.