
ನವದೆಹಲಿ: ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾದ ಗರ್ಭಿಣಿ ಹಾಗೂ ಆಕೆಯ ಮಗುವಿಗೆ ಮಾನವೀಯತೆ ಆಧಾರದಲ್ಲಿ ಭಾರತ ಪ್ರವೇಶಿಸಲು ಅವಕಾಶ ಮಾಡಿಕೊಡುವುದನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು, ಪಶ್ಚಿಮ ಬಂಗಾಳದ ಮಾಲ್ದಾದಲ್ಲಿರುವ ಭಾರತ– ಬಾಂಗ್ಲಾದೇಶ ಗಡಿ ಮೂಲಕ ಪ್ರವೇಶಿಸಲು ಮಹಿಳೆಗೆ ಅವಕಾಶ ನೀಡುವ ಬಗ್ಗೆ ಸೂಚನೆ ನೀಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೇಳಿತು.
‘ನ್ಯಾಯಾಲಯವು ಪ್ರಕರಣವನ್ನು ಮಾನವೀಯ ಆಧಾರದಲ್ಲಿ ಪರಿಗಣಿಸಲು ಕೇಳುತ್ತಿದೆ. ಈ ವಿಷಯದ ಬಗ್ಗೆ ನಮಗೆ ಎರಡು ದಿನ ಕಾಲಾವಕಾಶ ನೀಡಿ. ಈ ಕುರಿತು ಪರಿಶೀಲಿಸುತ್ತೇವೆ’ ಎಂದು ತುಷಾರ್ ಮೆಹ್ತಾ ಹೇಳಿದರು.
ಬಾಂಗ್ಲಾದೇಶದ ಹಲವು ಅಕ್ರಮ ವಲಸಿಗರನ್ನು ಭಾರತವು ಗಡಿಪಾರು ಮಾಡಿದೆ. ಇದನ್ನು ಪ್ರಶ್ನಿಸಿ ಗರ್ಭಿಣಿಯ ತಂದೆ ಕಲ್ಕತ್ತ ಹೈಕೋರ್ಟ್ ಮೊರೆ ಹೋಗಿದ್ದರು. ಗಡೀಪಾರು ಮಾಡಲಾದ 6 ಮಂದಿಯನ್ನು ಒಂದು ತಿಂಗಳೊಳಗಾಗಿ ಭಾರತಕ್ಕೆ ಮರಳಿ ಕರೆಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕೇಂದ್ರವು ಸುಪ್ರೀಂ ಮೊರೆ ಹೋಗಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.3ಕ್ಕೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.