ADVERTISEMENT

ಲೈಂಗಿಕ ದೌರ್ಜನ್ಯ ಕುರಿತ ಬಾಂಬೆ ಹೈಕೋರ್ಟ್‌ ತೀರ್ಪನ್ನು ರದ್ದುಪಡಿಸಿದ 'ಸುಪ್ರೀಂ'

ಪಿಟಿಐ
Published 18 ನವೆಂಬರ್ 2021, 21:41 IST
Last Updated 18 ನವೆಂಬರ್ 2021, 21:41 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಬಾಲಕಿಯ ಚರ್ಮಕ್ಕೆ ಆರೋಪಿಯ ಚರ್ಮ ತಾಗಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪರಿಗಣಿಸಬಹುದು ಎಂದು ಬಾಂಬೆ ಹೈಕೋರ್ಟ್‌ ಪೋಕ್ಸೊ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಗುರುವಾರ ರದ್ದುಪಡಿಸಿದೆ. ದೌರ್ಜನ್ಯ ಎಸಗಿದ ವ್ಯಕ್ತಿಯ ಲೈಂಗಿಕತೆಯ ಉದ್ದೇಶವೇ ಇಲ್ಲಿ ಮುಖ್ಯವಾದ ಅಂಶವೇ ಹೊರತು ಬಾಲಕಿಯ ಚರ್ಮಕ್ಕೆ ಆರೋಪಿಯ ಚರ್ಮ ತಾಗಿದೆಯೇ ಎಂಬುದಲ್ಲ ಎಂದು ಕೋರ್ಟ್‌ ಹೇಳಿದೆ.

ಸಂತ್ರಸ್ತ ಬಾಲಕಿಯ ಚರ್ಮಕ್ಕೆ ಆರೋಪಿಯ ಚರ್ಮ ತಾಗಿಲ್ಲ. ಹಾಗಾಗಿ, ಲೈಂಗಿಕ ದೌರ್ಜನ್ಯ ನಡೆದಿದೆ ಎಂದುಪೋಕ್ಸೊ ಕಾಯ್ದೆ ಅಡಿಯಲ್ಲಿ ಪರಿಗಣಿಸುವುದು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ ಹೇಳಿತ್ತು.

ಬಾಲಕಿಯ ಲೈಂಗಿಕ ಅಂಗ ಅಥವಾ ಇನ್ನಾವುದೇ ಭಾಗವನ್ನು ಲೈಂಗಿಕತೆಯ ಉದ್ದೇಶದಿಂದ ಮುಟ್ಟುವುದು ಪೋಕ್ಸೊ ಕಾಯ್ದೆಯ ಸೆಕ್ಷನ್‌ 7ರ ಪ್ರಕಾರ ಲೈಂಗಿಕ ದೌರ್ಜನ್ಯ ಎನಿಸುತ್ತದೆ ಎಂದು ನ್ಯಾಯಮೂರ್ತಿ ಯು.ಯು. ಲಲಿತ್‌ ನೇತೃತ್ವದ ಪೀಠವು ಹೇಳಿದೆ. ಅಪರಾಧಿಯು ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವುದು ಕೂಡ ಕಾನೂನಿನ ಉದ್ದೇಶ ಎಂದು ಪೀಠ ಹೇಳಿದೆ.

ADVERTISEMENT

‘ಶಾಸಕಾಂಗವು ಕಾಯ್ದೆಯ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಿರುವಾಗ ನ್ಯಾಯಾಲಯಗಳು ಗೊಂದಲ ಸೃಷ್ಟಿಲು ಯತ್ನಿಸಬಾರದು. ಗೊಂದಲವನ್ನು ಹುಡುಕುವುದಕ್ಕೆ ಅತ್ಯುತ್ಸಾಹ ತೋರುವುದು ಸರಿಯಲ್ಲ’ ಎಂದು ನ್ಯಾಯಮೂರ್ತಿಗಳಾದ ಎಸ್‌. ರವೀಂದ್ರ ಭಟ್‌ ಮತ್ತು ಬೆಲಾ ಎಂ. ತ್ರಿವೇದಿ ಅವರೂ ಇದ್ದ ಪೀಠ ಸ್ಪಷ್ಟಪಡಿಸಿದೆ.

‘ಕಾನೂನನ್ನು ವ್ಯಾಖ್ಯಾನದ ಮೂಲಕ ಇನ್ನಷ್ಟು ಬಲಪಡಿಸಬೇಕೇ ಹೊರತು ನಾಶಪಡಿಸಲು ಯತ್ನಿಸಬಾರದು. ಸಂಕುಚಿತವಾದ ವ್ಯಾಖ್ಯಾನದಿಂದ ಕಾನೂನಿನ ಉದ್ದೇಶವನ್ನೇ ಸೋಲಿಸುವುದನ್ನು ಒಪ್ಪಲಾಗದು. ವಿಸ್ತಾರವಾದ ವ್ಯಾಖ್ಯಾನ ನೀಡದೇ ಇದ್ದರೆ ಕಾನೂನಿನ ಉದ್ದೇಶವನ್ನೇ ಈಡೇರಿಸಲಾಗದು’ ಎಂದು ಪೀಠವು ಹೇಳಿದೆ.

ಬಾಂಬೆ ಹೈಕೋರ್ಟ್‌ನ ತೀರ್ಪು ಅಪಾಯಕಾರಿ ಮತ್ತು ಅತಿರೇಕದ ಪೂರ್ವನಿದರ್ಶನ ಸೃಷ್ಟಿಸುತ್ತದೆ. ಇದನ್ನು ರದ್ದುಪಡಿಸಬೇಕು ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಸುಪ್ರೀಂ ಕೋರ್ಟ್‌ಗೆ ಇತ್ತೀಚೆಗೆ ಹೇಳಿದ್ದರು.

ಅಟಾರ್ನಿ ಜನರಲ್‌ ಮತ್ತು ರಾಷ್ಟ್ರೀಯ ಮಹಿಳಾ ಆಯೋಗವು ಸಲ್ಲಿಸಿದ್ದ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿ ತೀರ್ಪು ಕೊಟ್ಟಿತು.ಆರೋಪಿಯು ಬಾಲಕಿಯ ಬಟ್ಟೆಯ ಮೇಲಿನಿಂದ ಎದೆ ಸವರಿದ್ದಾನೆ. ಹಾಗಾಗಿ, ಲೈಂಗಿಕ ದೌರ್ಜನ್ಯ ಎಂದು ಪೋಕ್ಸೊ ಅಡಿಯಲ್ಲಿ ಪರಿಗಣಿಸಲಾಗದು ಎಂದು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದ ನ್ಯಾಯಮೂರ್ತಿ ಪುಷ್ಪಾ ಗನೆದಿವಾಲಾ ನೀಡಿದ್ದ ತೀರ್ಪಿನ ವಿರುದ್ಧ ಈ ಮೇಲ್ಮನವಿಗಳು ಸಲ್ಲಿಕೆಯಾಗಿದ್ದವು.

12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 39 ವರ್ಷದ ಅಪರಾಧಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿ ಸೆಷನ್ಸ್‌ ಕೋರ್ಟ್‌ ಆದೇಶ ನೀಡಿತ್ತು. ಅದನ್ನು ನ್ಯಾಯಮೂರ್ತಿ ಪುಷ್ಪಾ ಅವರು ಪರಿಷ್ಕರಿಸಿದ್ದರು. ಪೋಕ್ಸೊ ಅಡಿಯಲ್ಲಿ ನೀಡಿದ್ದ ಶಿಕ್ಷೆಯನ್ನು ರದ್ದುಪಡಿಸಿದ್ದರು. ಆದರೆ, ಭಾರತೀಯ ದಂಡ ಸಂಹಿತೆಯ 354ನೇ ಸೆಕ್ಷನ್‌ ಅಡಿ ನೀಡಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.