ADVERTISEMENT

ಅತ್ಯಾಚಾರ ಪ್ರಕರಣದ ದೂರುದಾರೆ–ಅಪರಾಧಿ ವಿವಾಹ: ಶಿಕ್ಷೆ ರದ್ದು ಮಾಡಿದ SC

ಮುಂಚೆಯೇ ಊಹಿಸಿದ್ದೆವು ಎಂದ ಸುಪ್ರೀಂ ಕೋರ್ಟ್‌

ಪಿಟಿಐ
Published 27 ಡಿಸೆಂಬರ್ 2025, 16:18 IST
Last Updated 27 ಡಿಸೆಂಬರ್ 2025, 16:18 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಅತ್ಯಾಚಾರ ಪ್ರಕರಣದ ಅಪರಾಧಿಯೊಬ್ಬರ ಶಿಕ್ಷೆಯನ್ನು ಸು‍ಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಜತೆಗೆ ದೂರುದಾರೆ ಮತ್ತು ಅಪರಾಧಿ ವಿವಾಹವಾಗಿರುವುದನ್ನು ಗಮನಿಸಿದ ನ್ಯಾಯಪೀಠ, ‘ಈ ಪ್ರಕರಣ ಹೀಗೆಯೇ ತಿರುವು ಪಡೆಯುತ್ತದೆ ಎಂಬುದನ್ನು ನಾವು ಮುಂಚೆಯೇ ಊಹಿಸಿದ್ದೆವು’ ಎಂದೂ ಹೇಳಿದೆ. 

ಮದುವೆ ಆಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು 2021ರಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಿಸಿದ್ದರು. ಮಧ್ಯಪ್ರದೇಶ ಹೈಕೋರ್ಟ್‌ 2024ರ ಏಪ್ರಿಲ್‌ನಲ್ಲಿ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ, ವ್ಯಕ್ತಿಯು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾ.ಸತೀಶ್‌ ಚಂದ್ರ ಶರ್ಮಾ ಅವರ ಪೀಠವು ವಿಚಾರಣೆ ನಡೆಸಿ, ದೂರುದಾರೆ ಮತ್ತು ಅಪರಾಧಿಯ ಪೋಷಕರ ಸಮ್ಮುಖದಲ್ಲಿ ಅವರೊಂದಿಗೆ ಮಾತುಕತೆ ನಡೆಸಿತ್ತು. ಇಬ್ಬರಿಗೂ ಒಬ್ಬರನ್ನೊಬ್ಬರು ಮದುವೆಯಾಗುವ ಇರಾದೆ ಇರುವುದನ್ನು ಖಚಿತಪಡಿಸಿಕೊಂಡು, ವ್ಯಕ್ತಿಗೆ ಜಾಮೀನು ನೀಡಿತ್ತು. ಅದರಂತೆ 2025ರ ಜುಲೈನಲ್ಲಿ ಇಬ್ಬರೂ ಮದುವೆಯಾಗಿದ್ದಾರೆ.

ADVERTISEMENT

ಡಿ.5ರಂದು ಪ್ರಕರಣದ ಅಂತಿಮ ತೀರ್ಪು ಹೊರಡಿಸಿದ ನ್ಯಾಯಪೀಠ, ‘ತಪ್ಪು ತಿಳಿವಳಿಕೆಯಿಂದ ದೂರುದಾರೆ ಮತ್ತು ಅಪರಾಧಿಯ ನಡುವಿನ ಒಮ್ಮತದ ಸಂಬಂಧವನ್ನು ಅಪರಾಧ ಎಂದು ಚಿತ್ರಿಸಲಾಗಿತ್ತು. ಹೀಗಾಗಿ ಸಂವಿಧಾನದ 142ನೇ ವಿಧಿಯ ಅನ್ವಯ ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ಒದಗಿಸಲು ಅರ್ಜಿದಾರರ ವಿರುದ್ಧದ ಎಲ್ಲಾ ಶಿಕ್ಷೆ ರದ್ದುಗೊಳಿಸುತ್ತಿದ್ದೇವೆ’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.