ADVERTISEMENT

ರಾಜ್ಯಪಾಲರ ವಿಳಂಬ ಧೋರಣೆ| ನ್ಯಾಯಾಂಗ ನಿಂದನೆ ಆಗುವುದೇ: ಸುಪ್ರೀಂ ಕೋರ್ಟ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 15:49 IST
Last Updated 2 ಸೆಪ್ಟೆಂಬರ್ 2025, 15:49 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ತಮಿಳುನಾಡಿಗೆ ಸಂಬಂಧಿಸಿದ ಪ್ರಕರಣದಲ್ಲಿ ಏಪ್ರಿಲ್‌ 8ರಂದು ನೀಡಿರುವ ತೀರ್ಪಿನಂತೆ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಮಸೂದೆಗಳಿಗೆ ಅಂಕಿತ ಹಾಕಲು ನಿಗದಿಪಡಿಸಿದ ಗಡುವು ಪಾಲಿಸದಿದ್ದರೆ ಅದರಿಂದ ಆಗುವ ಪರಿಣಾಮಗಳೇನು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕೇಳಿದೆ.

ಎಲ್ಲಾ ಮಸೂದೆಗಳಿಗೆ ಅಂಕಿತ ಹಾಕುವುದಕ್ಕೆ ಸಂಬಂಧಿಸಿದಂತೆ ಕಾಲಮಿತಿ ನಿಗದಿಪಡಿಸಲು ನ್ಯಾಯಾಲಯಕ್ಕೆ ಇರುವ ಅಧಿಕಾರದ ಬಗ್ಗೆಯೂ ಸುಪ್ರೀಂ ಕೋರ್ಟ್‌ ಪೀಠ ಅನುಮಾನ ವ್ಯಕ್ತಪಡಿಸಿದೆ.

ಯಾವ ರಾಜಕೀಯ ಪಕ್ಷ ಅಧಿಕಾರದಲ್ಲಿದೆ ಅಥವಾ ಅಧಿಕಾರದಲ್ಲಿತ್ತು ಎಂಬುದರ ಆಧಾರದ ಮೇಲೆ ಈ ವಿಷಯವನ್ನು ನಿರ್ಧರಿಸುವುದಿಲ್ಲ ಎಂಬುದನ್ನೂ ಪೀಠವು ಸ್ಪಷ್ಟಪಡಿಸಿದೆ. 

ADVERTISEMENT

ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕಲು ಕಾಲಮಿತಿ ನಿಗದಿಪಡಿಸಬಹುದೇ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಲ್ಲೇಖಿಸಿರುವ ಸಾಂವಿಧಾನಿಕ ಪ್ರಶ್ನೆಗಳ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

ಆರನೇ ದಿನದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು, ‘ಮಸೂದೆಗಳಿಗೆ ನಿಗದಿತ ಸಮಯದೊಳಗೆ ಅಂಕಿತ ಹಾಕದಿದ್ದರೆ, ರಾಷ್ಟ್ರಪತಿ ಅಥವಾ ರಾಜ್ಯಪಾಲರನ್ನು ನ್ಯಾಯಾಂಗ ನಿಂದನೆಗಾಗಿ ವಿಚಾರಣೆಗೆ ಒಳಪಡಿಸಬಹುದೇ’ ಎಂದು ಕೇಳಿತು.

‘ಅಂಕಿತ ಹಾಕಲು ವಿಳಂಬ ಮಾಡಿದರೆ, ಸಂಬಂಧಪಟ್ಟವರು ಸಮಸ್ಯೆಗೆ ಪರಿಹಾರ ಕೋರಿ ನ್ಯಾಯಾಲಯದ ಮೊರೆಹೋಗಬಹುದು. ಆಗ ನ್ಯಾಯಾಲಯವು ಸಮಯದ ಮಿತಿಯೊಳಗೆ ನಿರ್ಧಾರ ತೆಗೆದುಕೊಳ್ಳಬೇಕೆಂದು ನಿರ್ದೇಶಿಸಬಹುದು. ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ನ್ಯಾಯಾಲಯವು ಸಾಮಾನ್ಯ ಕಾಲಮಿತಿ ನಿಗದಿಪಡಿಸಬೇಕು ಎಂದು ಇದರ ಅರ್ಥವಲ್ಲ’ ಎಂದು ಪೀಠ ಹೇಳಿದೆ. 

ತಮಿಳುನಾಡು ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ, ‘ರಾಜ್ಯಪಾಲರು ಮಸೂದೆಗಳನ್ನು ಅನಿರ್ದಿಷ್ಟ ಅವಧಿಯವರೆಗೆ ತಡೆಹಿಡಿದ ಪುನರಾವರ್ತಿತ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕಾಲಮಿತಿ ನಿಗದಿಪಡಿಸುವುದು ಅಗತ್ಯ’ ಎಂದು ವಾದಿಸಿದರು. 

ಮಸೂದೆಗಳಿಗೆ ಅಂಕಿತ ಹಾಕದೆ ‘ಸುದೀರ್ಘ ಅವಧಿ’ಗೆ ತಮ್ಮ ಬಳಿ ಇರಿಸಿಕೊಳ್ಳಲು ರಾಜ್ಯಪಾಲರಿಗೆ ಅನುಮತಿಸಿದರೆ, ಸಂವಿಧಾನದ 200ನೇ ವಿಧಿಯಲ್ಲಿ ಬಳಸಿರುವ ‘ಸಾಧ್ಯ ವಾದಷ್ಟು ಬೇಗ’ ಎಂಬ ಪದವು ತನ್ನ ಉದ್ದೇಶವನ್ನು ಪೂರೈಸುವುದಿಲ್ಲ ಎಂದು ಪೀಠವು ಆಗಸ್ಟ್‌ 28ರಂದು ತಿಳಿಸಿತ್ತು. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ವಿಕ್ರಮನಾಥ್, ಪಿ.ಎಸ್‌.ನರಸಿಂಹ ಮತ್ತು ಎ.ಎಸ್‌.ಚಂದೂರ್‌ಕರ್ ಅವರು ಪೀಠದಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.