ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯೇ ತನ್ನನ್ನು ಅಪಾಯಕ್ಕೆ ಒಡ್ಡಿಕೊಂಡಿದ್ದಾಳೆ ಎಂಬ ಹೇಳಿಕೆ ನೀಡಿದ್ದ ಅಲಹಾಬಾದ್ ಹೈಕೋರ್ಟ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ‘ಜಾಮೀನು ಅರ್ಜಿ ನಿರ್ಧರಿಸುವ ಸಂದರ್ಭದಲ್ಲಿ ಇಂಥ ಅವಲೋಕನವೇಕೆ ಎಂದು ಅಚ್ಚರಿ ವ್ಯಕ್ತಪಡಿಸಿದೆ.
ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡುವಾಗ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಅವರು, ಆಕೆ (ದೂರುದಾರಳು) ತನಗೆ ತಾನೇ ಸಂಕಷ್ಟ ತಂದುಕೊಂಡಿದ್ದಾಳೆ. ಆದ್ದರಿಂದ ಆಕೆಯ ಮೇಲಾದ ಅತ್ಯಾಚಾರಕ್ಕೆ ಅವಳೇ ಜವಾಬ್ದಾರಳು’ ಎಂದು ಅಭಿಪ್ರಾಯಪಟ್ಟಿದ್ದರು.
‘ಮಹಿಳೆಯರ ಸ್ತನಗಳನ್ನು ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರದ ಯತ್ನವಲ್ಲ’ ಎಂದು ಅಭಿಪ್ರಾಯಪಟ್ಟ ಅಲಹಾಬಾದ್ ಹೈಕೋರ್ಟ್‌ನ ಮಾರ್ಚ್ 17ರ ಆದೇಶ ಕುರಿತು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತು.
ನ್ಯಾ. ಬಿ.ಆರ್. ಗವಾಯಿ ಹಾಗೂ ನ್ಯಾ. ಅಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು ವಿಚಾರಣೆ ನಡೆಸಿ, ‘ಒಂದೇ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ಪ್ರತ್ಯೇಕ ಪ್ರಕರಣಗಳಲ್ಲಿ ನೀಡಿದ ಎರಡು ಹೇಳಿಕೆಗಳಿವು’ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ನ್ಯಾ. ಗವಾಯಿ ಪ್ರತಿಕ್ರಿಯಿಸಿ, ‘ಜಾಮೀನು ನೀಡಬೇಕೆನಿಸಿದರೆ ನೀಡಿ. ಆದರೆ ಸಂತ್ರಸ್ತೆಯೇ ತನ್ನನ್ನು ಅಪಾಯಕ್ಕೆ ಒಡ್ಡಿಕೊಂಡಿದ್ದಾಳೆ ಎಂಬ ಹೇಳಿಕೆ ಏಕೆ? ಇಂಥ ವಿಷಯಗಳಲ್ಲಿ ಪೀಠವು ಹೆಚ್ಚು ಜಾಗರೂಕವಾಗಿರಬೇಕು’ ಎಂದಿದ್ದಾರೆ.
‘ಇಂಥ ಹೇಳಿಕೆಗಳನ್ನು ಸಾಮಾನ್ಯ ಜನರು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ಗಮದಲ್ಲಿಟ್ಟುಕೊಳ್ಳಬೇಕು’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳಿಗೆ ಸುಪ್ರೀಂ ಕೋರ್ಟ್ ಮುಂದೂಡಿದೆ.
ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್‌ನ ಮಾರ್ಚ್ 17ರ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಾರ್ಚ್ 26ರಂದು ತಡೆ ನೀಡಿತ್ತು. ಹೈಕೋರ್ಟ್‌ನ ಆದೇಶವು ಅಸೂಕ್ಷ್ಮ ಹಾಗೂ ಅಮಾನವೀಯ ವಿಧಾನವಾಗಿದೆ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಸೂಚನೆ ಮೇರೆಗೆ ಪ್ರಕರಣವನ್ನು ಸ್ವಯಂ ಪ್ರೇರಣೆಯಿಂದ ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.