ADVERTISEMENT

ನಿರ್ಭಯಾ ಪ್ರಕರಣದ ಅಪರಾಧಿ ಅಕ್ಷಯ್‌ ಗಲ್ಲು ಶಿಕ್ಷೆ ಎತ್ತಿಹಿಡಿದ ಸುಪ್ರೀಂ

ಮರುಪರಿಶೀಲನಾ ಅರ್ಜಿ ತಿರಸ್ಕೃತ

ಏಜೆನ್ಸೀಸ್
Published 18 ಡಿಸೆಂಬರ್ 2019, 18:44 IST
Last Updated 18 ಡಿಸೆಂಬರ್ 2019, 18:44 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ‘ನಿರ್ಭಯಾ’ ಮೇಲೆ ಅತ್ಯಾಚಾರ ಎಸಗಿದ್ದ ಅಕ್ಷಯ್‌ ಕುಮಾರ್‌ನಿಗೆ ವಿಧಿಸಲಾಗಿದ್ದ ಗಲ್ಲುಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಮತ್ತೊಮ್ಮೆ ದೃಢಪಡಿಸಿದೆ.

ಮರಣದಂಡನೆಯನ್ನು 2017ರಲ್ಲಿ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು. ಅದನ್ನು ಪ್ರಶ್ನಿಸಿ ಅಕ್ಷಯ್‌ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದ. ಆದರೆ, ಅದನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾ ಮಾಡಿದೆ. ಇತರ ಮೂವರು ಅಪರಾಧಿಗಳುಈ ಹಿಂದೆಯೇ ಸಲ್ಲಿಸಿದ್ದ ಮರುಪರಿಶೀಲನೆ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿ ಹಾಕಿತ್ತು.

‘2017ರ ತೀರ್ಪಿನಲ್ಲಿ ಯಾವುದೇ ತಪ್ಪು ಕಾಣಿಸುವುದಿಲ್ಲ. ತೀರ್ಪಿನ ಮರು ಪರಿಶೀಲನೆಗೆ ಇತರ ಅಪರಾಧಿಗಳು ನೀಡಿದ್ದ ಕಾರಣಗಳಿಗಿಂತ ಭಿನ್ನವಾದ ಯಾವ ಕಾರಣವನ್ನೂ ಅಕ್ಷಯ್‌ ನೀಡಲಿಲ್ಲ. ಇದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದ್ದು, ಅಪರಾಧಿಗಳಿಗೆ ಮರಣದಂಡನೆ ನೀಡಿರುವುದು ಸರಿಯಾಗಿದೆ’ ಎಂದು ನ್ಯಾಯಮೂರ್ತಿ ಆರ್‌.ಭಾನುಮತಿ ನೇತೃತ್ವದ ಪೀಠವು ಹೇಳಿದೆ.

ಇದರೊಂದಿಗೆ ಅತ್ಯಾಚಾರಿಗಳಿಗೆ ಇನ್ನು ಉಳಿದಿರುವುದು ಪರಿಹಾರಾತ್ಮಕ ಅರ್ಜಿ ಸಲ್ಲಿಕೆಯ ಅವಕಾಶ ಮಾತ್ರ. ಅದು ಕಾನೂನಾತ್ಮಕವಾಗಿ ಲಭಿಸುವ ಕೊನೆಯ ಅವಕಾಶವಾಗಿದೆ.

ADVERTISEMENT

ಭಾರತದಲ್ಲಿ ಗರಿಷ್ಠ ಶಿಕ್ಷೆಯನ್ನು ರದ್ದುಪಡಿಸಬೇಕು. ನಿರ್ಭಯಾ ಪ್ರಕರಣದಲ್ಲಿ ಅಕ್ಷಯ್‌ನನ್ನು ತಪ್ಪಾಗಿ ಸಿಲುಕಿಸಲಾಗಿತ್ತು. ಆತನ ವಿರುದ್ಧ ನಕಲಿ ದಾಖಲೆ ಸೃಷ್ಟಿಸಲಾಗಿತ್ತು. ಅಲ್ಲದೆ, ಸಂತ್ರಸ್ತೆಯು ಮರಣ ಹೊಂದುವುದಕ್ಕೂ ಮುನ್ನ ನೀಡಿದ ಹೇಳಿಕೆಯಲ್ಲಿ ಅಕ್ಷಯ್‌ ಕುಮಾರ್ ಸಿಂಗ್ಹೆಸರು ಉಲ್ಲೇಖಿಸಿರಲಿಲ್ಲ. ಔಷಧಗಳ ಓವರ್‌ಡೋಸ್‌ನಿಂದಾಗಿ ಸಂತ್ರಸ್ತೆ ಮೃತಪಟ್ಟಿದ್ದರು ಎಂದುಅಕ್ಷಯ್‌ ಪರ ವಕೀಲ ಡಾ.ಎ.ಪಿ.ಸಿಂಗ್ವಾದ ಮಂಡಿಸಿದ್ದರು.

ನಿರ್ಭಯಾ ಪ್ರಕರಣದಲ್ಲಿ ಒಟ್ಟು ಆರು ಜನರನ್ನು ಅಪರಾಧಿಗಳನ್ನಾಗಿ ತೀರ್ಪು ನೀಡಲಾಗಿತ್ತು. ಇವರಲ್ಲೊಬ್ಬ ಅಪ್ರಾಪ್ತ ಜೈಲು ಶಿಕ್ಷೆಯನ್ನು ಅನುಭವಿಸಿ ನಂತರ ಬಿಡುಗಡೆಯಾಗಿದ್ದರೆ, ಮತ್ತೊಬ್ಬ ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದನು. ಉಳಿದ ಅಪರಾಧಿಗಳಿಗೆ ಮರಣದಂಡನೆಯನ್ನು ವಿಧಿಸಲಾಗಿತ್ತು. ಈ ಪೈಕಿ ಅಪರಾಧಿ ಅಕ್ಷಯ್ ಸಿಂಗ್ ಹೊರತುಪಡಿಸಿ ಇತರ ಅಪರಾಧಿಗಳಾದ ಮುಕೇಶ್ ಸಿಂಗ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾರ ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಈಗಾಗಲೇ ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.