ADVERTISEMENT

ನಿವೃತ್ತಿ ಅಂಚಿನಲ್ಲಿರುವ ನ್ಯಾಯಧೀಶರು ಹೆಚ್ಚು ಆದೇಶ ಹೊರಡಿಸುವುದು ಸರಿಯಲ್ಲ: SC

ಪಿಟಿಐ
Published 18 ಡಿಸೆಂಬರ್ 2025, 14:10 IST
Last Updated 18 ಡಿಸೆಂಬರ್ 2025, 14:10 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ (ಪಿಟಿಐ): ನ್ಯಾಯಾಧೀಶರು ನಿವೃತ್ತಿ ಅಂಚಿಗೆ ಬಂದಾಗ ಹೆಚ್ಚೆಚ್ಚು ಆದೇಶಗಳನ್ನು ಹೊರಡಿಸುವ ಪ್ರವೃತ್ತಿ ಬೆಳೆಯುತ್ತಿರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದೆ.

‘ಕೊನೆಯ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ ಸಿಕ್ಸ್‌ರ್‌ಗಳನ್ನು ಸಿಡಿಸುವಂತೆ ಇದು ನಡೆಯುತ್ತಿದೆ’ ಎಂದು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್‌ ನೇತೃತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಪೀಠವು ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ, ವಿಪುಲ್‌ ಎಂ. ಪಾಂಚೋಲಿ ಅವರನ್ನೂ ಒಳಗೊಂಡಿದೆ.

ಮಧ್ಯಪ್ರದೇಶದ ಜಿಲ್ಲಾ ಪ್ರಧಾನ ನ್ಯಾಯಾಧೀಶರೊಬ್ಬರು ತಮ್ಮ ನಿವೃತ್ತಿಗೂ ಮೊದಲು ಕೆಲ ಪ್ರಶ್ನಾರ್ಹ ಆದೇಶಗಳನ್ನು ಹೊರಡಿಸಿದ್ದರು. ಈ ಕಾರಣಕ್ಕಾಗಿ ಹೈಕೋರ್ಟ್‌ನ ಪೂರ್ಣ ಪೀಠವು ಅವರನ್ನು ನಿವೃತ್ತಿಗೂ 10 ದಿನ ಮುನ್ನ ಅಮಾನತುಗೊಳಿಸಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸಿಜೆಐ ನೇತೃತ್ವದ ಪೀಠ ವಿಚಾರಣೆ ನಡೆಸಿತು.

ADVERTISEMENT

ಮಧ್ಯಪ್ರದೇಶದ ಈ ನ್ಯಾಯಾಧೀಶರು ನವೆಂಬರ್‌ 30ರಂದು ನಿವೃತ್ತಿ ಆಗಬೇಕಿತ್ತು. ಆದರೆ ನ. 19ರಂದು ಅವರನ್ನು ಅಮಾನತುಗೊಳಿಸಲಾಗಿತ್ತು.

‘ಅರ್ಜಿದಾರರು ನಿವೃತ್ತಿಗೂ ಮುನ್ನ ಸಿಕ್ಸ್‌ರ್‌ಗಳನ್ನು ಹೊಡೆಯಲು ಪ್ರಾರಂಭಿಸಿದರು. ಇದು ದುರದೃಷ್ಟಕರ ಪ್ರವೃತ್ತಿ. ಇದನ್ನು ಹೆಚ್ಚಿಗೆ ವಿವರಿಸಲು ಬಯಸುವುದಿಲ್ಲ’ ಎಂದು ಪೀಠ ಹೇಳಿತು.  

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ವಿಪಿನ್‌ ಸಂಘಿ, ‘ಅರ್ಜಿದಾರರು, ವಾರ್ಷಿಕ ಗೋಪ್ಯ ವರದಿಗಳಲ್ಲಿ ದೋಷರಹಿತ ಸೇವಾ ದಾಖಲೆಗಳನ್ನು ಹೊಂದಿದ್ದಾರೆ. ನ್ಯಾಯಾಂಗ ಆದೇಶಗಳನ್ನು ಹೊರಡಿಸಿದ್ದಕ್ಕಾಗಿ ನ್ಯಾಯಾಂಗದ ಅಧಿಕಾರಿಗಳನ್ನು ಶಿಸ್ತುಕ್ರಮಕ್ಕೆ ಒಳಪಡಿಸಲು ಆಗುವುದಿಲ್ಲ’ ಎಂದು ವಾದಿಸಿದರು. ಅಮಾನತಿನ ಕಾನೂನು ಬದ್ಧತೆಯನ್ನು ಪ್ರಶ್ನಿಸಿದರು. 

ನ್ಯಾಯಾಧೀಶರು ಹೊರಡಿಸಿದ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು, ಈ ಆದೇಶಗಳನ್ನು ಉನ್ನತ ನ್ಯಾಯಾಲಯಗಳು ಸರಿಪಡಿಸಬಹುದು ಎಂದೂ ಅವರು ಹೇಳಿದರು.  

ತಪ್ಪಾದ ಆದೇಶಗಳಿಗೆ ನ್ಯಾಯಾಂಗದ ಅಧಿಕಾರಿ ವಿರುದ್ಧ ಸಾಮಾನ್ಯವಾಗಿ ಶಿಸ್ತು ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಪೀಠ ತಾತ್ವಿಕವಾಗಿ ಒಪ್ಪಿಕೊಂಡಿತು. ‘ಇದಕ್ಕಾಗಿ ಅಮಾನತುಗೊಳಿಸುವುದಿಲ್ಲ, ಆದರೆ ಆದೇಶಗಳು ಸ್ಪಷ್ಟವಾಗಿ ಅಪ್ರಾಮಾಣಿಕವಾಗಿದ್ದರೆ ಏನು ಮಾಡುವುದು?’ ಎಂದು ಸಿಜೆಐ ಪ್ರಶ್ನಿಸಿದರು. ನ್ಯಾಯಾಂಗದ ದೋಷ ಮತ್ತು ದುಷ್ಕೃತ್ಯದ ನಡುವೆ ವ್ಯತ್ಯಾಸವಿದೆಯಲ್ಲ ಎಂದು ಅವರು ಇದೇ ವೇಳೆ ತಿಳಿಸಿದರು.

ಈ ಕುರಿತ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದ ಪೀಠವು, ‘ಅಮಾನತು ಆದೇಶವನ್ನು ಹಿಂಪಡೆಯಲು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು’ ಎಂದು ಹೇಳಿತು. ಅದನ್ನು ನಾಲ್ಕು ವಾರಗಳಲ್ಲಿ ನಿರ್ಧರಿಸುವಂತೆ ಪೀಠವು ಹೈಕೋರ್ಟ್‌ಗೆ ನಿರ್ದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.