ADVERTISEMENT

ಎಸ್‌ಪಿ ಅನುಮೋದನೆ ಇಲ್ಲದೇ ವಕೀಲರಿಗೆ ಸಮನ್ಸ್‌ ನೀಡಬಾರದು: ಸುಪ್ರೀಂ ಕೋರ್ಟ್‌

ಇಬ್ಬರು ಹಿರಿಯ ವಕೀಲರಿಗೆ ಇ.ಡಿ ನೀಡಿದ್ದ ಸಮನ್ಸ್‌ ರದ್ದು ಮಾಡಿದ ‘ಸುಪ್ರೀಂ’

ಪಿಟಿಐ
Published 31 ಅಕ್ಟೋಬರ್ 2025, 14:26 IST
Last Updated 31 ಅಕ್ಟೋಬರ್ 2025, 14:26 IST
   

ನವದೆಹಲಿ: ಕ್ರಿಮಿನಲ್‌ ಪ್ರಕರಣಗಳ ತನಿಖೆ ಸಂದರ್ಭದಲ್ಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಅನುಮೋದನೆ ಇಲ್ಲದ ಹೊರತು ತನಿಖಾಧಿಕಾರಿಗಳು (ಐಒಗಳು) ವಕೀಲರಿಗೆ ಸಮನ್ಸ್‌ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

ತನ್ನ ಕಕ್ಷಿದಾರರಿಗೆ ಕಾನೂನು ಸಲಹೆ ನೀಡುವ ವಕೀಲರಿಗೆ ತನಿಖಾ ಸಂಸ್ಥೆಗಳು ಮನಸ್ಸಿಗೆ ತೋಚಿದಂತೆ ಸಮನ್ಸ್‌ ನೀಡುವುದಕ್ಕೆ ಕಡಿವಾಣ ಹಾಕುವುದಕ್ಕಾಗಿ ಸುಪ್ರೀಂ ಕೋರ್ಟ್‌, ಹಲವು ನಿರ್ದೇಶನಗಳನ್ನೂ ನೀಡಿದೆ.

ಪ್ರಕರಣವೊಂದರ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ), ಹಿರಿಯ ವಕೀಲರಾದ ಅರವಿಂದ ದಾತಾರ್ ಮತ್ತು ಪ್ರತಾಪ್‌ ವೇಣುಗೋಪಾಲ್‌ ಅವರಿಗೆ ನೀಡಿದ್ದ ಸಮನ್ಸ್‌ಗಳನ್ನು ರದ್ದುಪಡಿಸಿ ತೀರ್ಪು ನೀಡಿದ ವೇಳೆ ಸುಪ್ರೀಂ ಕೋರ್ಟ್‌ ಈ ನಿರ್ದೇಶನ ನೀಡಿದೆ.

ADVERTISEMENT

ಸುಪ್ರೀಂ ಕೋರ್ಟ್‌ನ ಈ ತೀರ್ಪು ವಕೀಲರು ಹಾಗೂ ಕಕ್ಷಿದಾರರ ಹಕ್ಕಗಳ ರಕ್ಷಣೆಗೆ ಸಂಬಂಧಿಸಿ ಮಹತ್ವದ ಕ್ರಮ ಎಂದು ವಿಶ್ಲೇಷಿಸಲಾಗುತ್ತಿದೆ.

ಹಣ ಅಕ್ರಮ ವರ್ಗಾವಣೆ ಕುರಿತು ನಡೆಸುತ್ತಿರುವ ತನಿಖೆ ಭಾಗವಾಗಿ ಜಾರಿ ನಿರ್ದೆಶನಾಲಯವು ದಾತಾರ್‌ ಹಾಗೂ ಪ್ರತಾಪ್‌ ವೇಣುಗೋಪಾಲ್‌ ಅವರಿಗೆ ಸಮನ್ಸ್‌ ನೀಡಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.

ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ, ನ್ಯಾಯಮೂರ್ತಿಗಳಾದ ಕೆ.ವಿನೋದಚಂದ್ರನ್ ಹಾಗೂ ಎನ್‌.ವಿ.ಅಂಜಾರಿಯಾ ಅವರು ಇದ್ದ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿತ್ತು. ಆಗಸ್ಟ್‌ 12ರಂದು ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಪೀಠ ಪ್ರಕಟಿಸಿದ್ದು, ಆದೇಶದ ವಿಸ್ತೃತ ಪ್ರತಿ ಇನ್ನಷ್ಟೆ ಲಭಿಸಬೇಕಿದೆ.

ದಾತಾರ್‌ ಹಾಗೂ ಪ್ರತಾಪ್ ಅವರಿಗೆ ಸಮನ್ಸ್‌ ನೀಡಿದ ಇ.ಡಿ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಕಾಲತ್ತು ವಹಿಸುವ ವಕೀಲರ ಸಂಘದಿಂದ (ಎಸ್‌ಸಿಎಒಆರ್‌ಎ) ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಇದು ವಿವಾದದ ಸ್ವರೂಪ ಪಡೆದ ನಂತರ, ತನ್ನ ಅಧಿಕಾರಿಗಳಿಗೆ ಕೆಲ ನಿರ್ದೇಶನಗಳನ್ನು ನೀಡಿ ಜಾರಿ ನಿರ್ದೇಶನಾಲಯ ಜೂನ್‌ 20ರಂದು ಸುತ್ತೋಲೆ ಹೊರಡಿಸಿತ್ತು. ಇ.ಡಿ ನಿರ್ದೇಶಕರಿಂದ ಪೂರ್ವಾನುಮತಿ ಮತ್ತು ಬಿಎಸ್‌ಎ ಸೆಕ್ಷನ್‌ 132ಕ್ಕೆ ಅನುಗುಣವಾಗಿ ಇಲ್ಲದ ಹೊರತು, ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ವಕೀಲರಿಗೆ ಸಮನ್ಸ್‌ ನೀಡದಂತೆ ತನ್ನ ಅಧಿಕಾರಿಗಳಿಗೆ ಸೂಚಿಸಿತ್ತು.

ಜಾರಿ ನಿರ್ದೇಶನಾಲಯವು ಇಬ್ಬರು ಹಿರಿಯ ವಕೀಲರಿಗೆ ಸಮನ್ಸ್‌ ನೀಡುವ ಮೂಲಕ ಅವರನ್ನು ನೇಮಕ ಮಾಡಿಕೊಂಡಿದ್ದ ಆರೋಪಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ
ಸುಪ್ರೀಂ ಕೋರ್ಟ್‌

‘ಸುಪ್ರೀಂ’ ತೀರ್ಪಿನ ಪ್ರಮುಖ ಅಂಶಗಳು

* ವಕೀಲರು ಹಾಗೂ ಕಕ್ಷಿದಾರರ ನಡುವಿನ ಸಂವಹನ ಗೌಪ್ಯವಾಗಿಡಬೇಕು. ಇದು ಕಕ್ಷಿದಾರರಿಗೆ ಭಾರತೀಯ ಸಾಕ್ಷ್ಯ ಅಧಿನಿಯಮ(ಬಿಎಸ್‌ಎ) ಸೆಕ್ಷನ್ 132ರಡಿ ನೀಡಲಾಗಿರುವ ಹಕ್ಕು

* ಕ್ರಿಮಿನಲ್‌ ಪ್ರಕರಣಗಳ ತನಿಖಾಧಿಕಾರಿಗಳು ಗಂಭೀರ ಪ್ರಕರಣದ ತನಿಖೆ ಭಾಗವಾಗಿ ಪ್ರಾಥಮಿಕ ವಿಚಾರಣೆ ನಡೆಸುವ ಠಾಣಾಧಿಕಾರಿಗಳು ಆರೋಪಿ ಪರ ಹಾಜರಾಗುವ ವಕೀಲರಿಗೆ ಸಮನ್ಸ್ ನೀಡುವಂತಿಲ್ಲ. ಬಿಎಸ್‌ಎ ಸೆಕ್ಷನ್ 132ರ ಅಡಿ ವಿನಾಯಿತಿ ನೀಡಲಾಗಿರುವ ಪ್ರಕರಣಗಳಿಗೆ ಇದು ಅನ್ವಯಿಸುವುದಿಲ್ಲ

* ವಿನಾಯಿತಿ ನೀಡಲಾಗಿದ್ದರೂ ಸಮನ್ಸ್‌ ನೀಡಬೇಕಾದ ಅಗತ್ಯ ಕಂಡುಬಂದಲ್ಲಿ ಅದಕ್ಕೆ ಕಾರಣಗಳನ್ನು ನೀಡಬೇಕು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಿಂತ ಕಡಿಮೆ ಶ್ರೇಣಿಯಲ್ಲದ ಮೇಲಧಿಕಾರಿಯಿಂದ ಅನುಮತಿ ಪಡೆಯಬೇಕು

* ವಕೀಲರಿಗೆ ಸಮನ್ಸ್‌ಗಳನ್ನು ನೀಡಿದ್ದಲ್ಲಿ ವಕೀಲರು ಅಥವಾ ಕಕ್ಷಿದಾರರು ಈ ಕುರಿತು ಮನವಿ ಸಲ್ಲಿಸಿದ್ದಲ್ಲಿ ಅವುಗಳು ನ್ಯಾಯಿಕ ಪರಾಮರ್ಶೆಗೆ ಒಳಪಡಲಿವೆ

* ಕಕ್ಷಿದಾರರಿಗೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇದ್ದಲ್ಲಿ ಅವುಗಳನ್ನು ವಕೀಲರು ಹಾಜರುಪಡಿಸಬೇಕು. ಇದು ಬಿಎಸ್‌ಎ ಸೆಕ್ಷನ್ 132ರಡಿ ಒದಗಿಸಲಾಗಿರುವ ಹಕ್ಕಿನ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ದಾಖಲೆಗಳನ್ನು ಹಾಜರುಪಡಿಸುವುದಿಲ್ಲ ಎಂದು ಹೇಳುವಂತಿಲ್ಲ

* ದಾಖಲೆಗಳನ್ನು ಹಾಜರುಪಡಿಸುವ ಕುರಿತ ಆದೇಶಕ್ಕೆ ಸಂಬಂಧಿಸಿ ಸಲ್ಲಿಕೆಯಾಗುವ ಆಕ್ಷೇಪಣೆಗಳು ಹಾಗೂ ದಾಖಲೆಗಳು ವಿಚಾರಣೆಗೆ ಪರಿಗಣಿಸುವುದಕ್ಕೆ ಯೋಗ್ಯವಾಗಿಯೇ ಎಂಬುದರ ಕುರಿತು ಎರಡೂ ಕಡೆಯವರ ವಾದಗಳನ್ನು ಆಲಿಸಿದ ಬಳಿಕ ಸಂಬಂಧಪಟ್ಟ ನ್ಯಾಯಾಲಯ ನಿರ್ಧಾರ ಕೈಗೊಳ್ಳುವುದು

* ಡಿಜಿಟಲ್ ಸಾಧನಗಳನ್ನು ಹಾಜರುಪಡಿಸುವಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಸೆಕ್ಷನ್‌ 94ರ ಪ್ರಕಾರ ತನಿಖಾಧಿಕಾರಿ ನಿರ್ದೇಶನ ನೀಡಿದ್ದಲ್ಲಿ ಅಂತಹ ಡಿಜಿಟಲ್‌ ಸಾಧನಗಳನ್ನು ವ್ಯಾಪ್ತಿಹೊಂದಿದ ನ್ಯಾಯಾಲಯಕ್ಕೆ ಮಾತ್ರ ಸಲ್ಲಿಸಬೇಕು

* ಯಾವುದೇ ಕಂಪನಿ ಸಂಸ್ಥೆಗೆ ಕಾನೂನು ಸಲಹೆ ನೀಡುವುದಕ್ಕಾಗಿ ನೇಮಕವಾಗಿರುವ ವಕೀಲರು ಬಿಎಸ್‌ಎ ಸೆಕ್ಷನ್ 132ರಡಿ ರಕ್ಷಣೆಗೆ ಅರ್ಹರಲ್ಲ

* ಕಕ್ಷಿದಾರರ ಸಮ್ಮತಿ ಇರದ ಹೊರತು ಯಾವುದೇ ವಕೀಲ ತನ್ನ ಕಕ್ಷಿದಾರರನೊಂದಿಗೆ ನಡೆಸಿದ ಸಂವಹನ ವಿವರಗಳನ್ನು/ದಾಖಲೆಗಳ ಸ್ಥಿತಿಗತಿ/ವಿಷಯವಸ್ತು/ನೀಡಿದ ಕಾನೂನು ಸಲಹೆಗಳನ್ನು ಬಹಿರಂಗಪಡಿಸುವಂತಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.